Advertisement

ಲೋಕಾ ಚುನಾವಣೆಗೆ ಕಾಂಗ್ರೆಸ್‌ ಪೂರ್ವ ಸಿದ್ಧತೆ 

06:00 AM Sep 03, 2018 | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಈಗಿನಿಂದಲೇ ಕಸರತ್ತು ಆರಂಭಿಸಿರುವ ಕಾಂಗ್ರೆಸ್‌ ನಾಯಕರು, ಎಲ್ಲ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳು ಮತ್ತು ಕ್ಷೇತ್ರಗಳಲ್ಲಿನ ಸದ್ಯದ ವಾತಾವರಣದ ಕುರಿತು ಒಂದು ಹಂತದ ಚುನಾವಣಾ ಸಿದ್ಧತೆಯ ಸಭೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

Advertisement

ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ದಕ್ಷಿಣ ಕರ್ನಾಟಕದ ಏಳೆಂಟು ಜಿಲ್ಲೆಗಳ ಸಭೆ ನಡೆಸಿದ್ದ ಕೈ ನಾಯಕರು ಶನಿವಾರ ಹಾಗೂ ಭಾನುವಾರ ಎರಡು ದಿನ ಸರಣಿ ಸಭೆ ನಡೆಸಿದರು. ಭಾನುವಾರ ಧಾರವಾಡ, ಹಾವೇರಿ, ಚಾಮರಾಜನಗರ, ಚಿತ್ರದುರ್ಗ, ಉತ್ತರ ಕನ್ನಡ, ದಾವಣಗೆರೆ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾ ಮುಖಂಡರು, ಶಾಸಕರು ಹಾಗೂ ಮಾಜಿ ಸಚಿವರು, ಪದಾಧಿಕಾರಿಗಳ ಅಭಿಪ್ರಾಯ ಪಡೆದರು.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಲಿಂಗಾಯತ ಸಮುದಾಯದವರ ಬದಲು ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆ ಕೇಳಿ ಬಂದಿದೆ ಎಂದು ತಿಳಿದು ಬಂದಿದೆ. ಮಾಜಿ ಸಚಿವ ಎಸ್‌. ಆರ್‌. ಮೋರೆಯವರಿಗೆ ಟಿಕೆಟ್‌ ನೀಡಬೇಕೆಂದು ಕೆಲವರು ಸಭೆಯಲ್ಲಿ ಬೇಡಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಕಳೆದ ಬಾರಿ ಸಂಸದ ಪ್ರಹ್ಲಾದ್‌ ಜೋಶಿ ವಿರುದ್ಧ  ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ
ಟಿಕೆಟ್‌ ನೀಡಿದರಷ್ಟೇ ಪಕ್ಷದ ಅಭ್ಯರ್ಥಿ ಗೆಲ್ಲಲು ಸಾಧ್ಯ ಎಂದು ಕೆಲವು ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಹಿಂದೂ ಅಥವಾ ಮುಸ್ಲಿಂ ಸಮುದಾಯದವರಲ್ಲಿ ಯಾರಿಗೆ ಟಿಕೆಟ್‌ ಕೊಡುತ್ತೀರಿ ಎನ್ನುವುದನ್ನು ಸ್ಪಷ್ಟಪಡಿಸುವಂತೆ ಮಾಜಿ ಸಚಿವ ಮನೋಹರ್‌ ತಹಸೀಲ್ದಾರ್‌ ಅವರು ನಾಯಕರಿಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಮುಸ್ಲಿಂ ಸಮುದಾಯಕ್ಕೆ ನೀಡುವುದಾದರೆ, ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮದ್‌ ಅವರಿಗೆ ನೀಡಬೇಕು. ಹಿಂದೂ ಸಮುದಾಯ ಪರಿಗಣಿಸುವುದಾದರೆ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಅಥವಾ ಬಸವರಾಜ್‌ ಶಿವಣ್ಣವರ್‌ಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ. ಆದರೆ, ಗದಗ ಜಿಲ್ಲಾ ಮುಖಂಡರು ಮಾಜಿ
ಶಾಸಕ ಡಿ.ಆರ್‌.ಪಾಟೀಲ್‌ಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿದ್ದಾರೆ. ಹೀಗಾಗಿ, ಎಲ್ಲರೂ ಒಮ್ಮತದಿಂದ ಮೂರು ಮಂದಿಯ ಹೆಸರು ಸೂಚಿಸುವಂತೆ ನಾಯಕರು ತಿಳಿಸಿದ್ದಾರೆಂದು ಗೊತ್ತಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷದ ಹಾಲಿ ಸಂಸದರಿದ್ದರೂ ಅವರ ಬದಲಿಗೆ ತಮಗೆ ಟಿಕೆಟ್‌ ನೀಡಬೇಕೆಂದು ಮಾಜಿ ಸಚಿವ ಶಿವಮೂರ್ತಿ ನಾಯಕ್‌ ತಮ್ಮ ಬೆಂಬಲಿಗರನ್ನು ಕರೆದುಕೊಂಡು ಬಂದು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ, ಶಿವಮೂರ್ತಿ ನಾಯಕ್‌ ಅವರಿಗೆ ಟಿಕೆಟ್‌ ನೀಡಿದರೆ ತಾವು ಪ್ರತಿಭಟನೆ ಮಾಡುವುದಾಗಿ ಮಾಯಕೊಂಡ ಅಭ್ಯರ್ಥಿಯಾಗಿದ್ದ ಬಸವರಾಜ್‌ ಹೇಳಿದ್ದಾರೆ. ಚಾಮರಾಜನಗರ, ಕೋಲಾರ, ತುಮಕೂರು ಹಾಗೂ ಚಿಕ್ಕಬಳ್ಳಾಪುರಗಳಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದರಿರುವುದರಿಂದ ಆ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಹಾಗೂ ಕೇಂದ್ರ ಸರ್ಕಾರದ ವಿರುದಟಛಿ ಹೋರಾಟ ರೂಪಿಸಲು ನಾಯಕರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಪಕ್ಷ ಸಂಘಟನೆ ಮಾಡಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ನಾಯಕರು ಸೂಚಿಸಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುರಿತು
ಇನ್ನೂ ಅಂತಿಮವಾಗಿಲ್ಲ. ಮಾಜಿ ಶಾಸಕ ಜಿ.ಎಸ್‌.ಪಾಟೀಲ್‌ ನೇತೃತ್ವದಲ್ಲಿ ಎಲ್ಲ ಮುಖಂಡರು ಸಭೆ ಸೇರಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪಕ್ಷದ ಮುಖಂಡರಿಗೆ ತಿಳಿಸಲಾಗುವುದು.

● ಎಚ್‌.ಕೆ. ಪಾಟೀಲ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next