Advertisement

ಕಾಂಗ್ರೆಸ್‌ 2ನೇ ಹಂತದ ನಾಯಕರಿಗೆ ಆದ್ಯತೆ

11:00 AM May 11, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಯುವಸಮುದಾಯವನ್ನು ಟಾರ್ಗೆಟ್‌ ಮಾಡಿಕೊಂಡು ಪಕ್ಷದಲ್ಲಿ ಎರಡನೇ ಹಂತದ ನಾಯಕರನ್ನು ಗುರುತಿಸಿ ಜವಾಬ್ದಾರಿ ನೀಡಲು ಕಾಂಗ್ರೆಸ್‌ ನೂತನ ಉಸ್ತುವಾರಿ ಕೆ.ಸಿ.ವೇಣುಗೋಪಾಲ ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

Advertisement

ಸಮನ್ವಯ ಸಮಿತಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಿಗೆ ತಮ್ಮ ಮುಂದಿನ ಗುರಿ ಏನು ಎಂಬುವುದನ್ನು ಸ್ಪಷ್ಟಪಡಿಸಿರುವ ಅವರು, ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಯುವ ಪಡೆಯ ಅಗತ್ಯವಿದೆ. ಕ್ರಿಯಾಶೀಲ ಯುವಕರನ್ನು ಗುರುತಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅಣಿ ಮಾಡುತ್ತೇನೆ. ಪಕ್ಷದ ಉಪಾಧ್ಯಕ್ಷ ರಾಹುಲ್‌ಗಾಂಧಿ ಸೂಚನೆಯೂ ಇದೇ ಆಗಿದೆ. ಪಕ್ಷದ ಹಿರಿಯ ನಾಯಕರು ಇದಕ್ಕೆ ಸಹಕರಿಸಬೇಕೆಂದು ಹೇಳಿದರು ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಹಾಗೂ ಪಕ್ಷದ ವಿರುದ್ಧ ಅಪಸ್ವರ ಎತ್ತಿರುವ ಹಿರಿಯ ನಾಯಕರ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ. ಅದಕ್ಕೋಸ್ಕರ ಶಿಸ್ತು ಸಮಿತಿಯಿದೆ. ಹೀಗಾಗಿ ರಾಜ್ಯ ನಾಯಕರಾರೂ ಅನಗತ್ಯ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದ್ದಾರೆನ್ನಲಾಗಿದೆ.

ಕೆಲವು ಸಚಿವರ ಕಾರ್ಯ ವೈಖರಿ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಜಿಲ್ಲಾ ಉಸ್ತುವಾರಿ  ಸಚಿವರು ತಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಸಮಯ ಕಳೆಯಬೇಕು. ಪಕ್ಷದ ಕೆಲವು ಮುಂಚೂಣಿ ಘಟಕಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ. ಅಂತಹ ಘಟಕಗಳನ್ನು ಕ್ರಿಯಾಶೀಲಗೊಳಿಸಬೇಕು. ಬರ ಕಾಮಗಾರಿಗಳನ್ನು ಯುಧ್ದೋಪಾದಿಯಲ್ಲಿ ಮಾಡುವಂತೆಯೂ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಹಿಂದಿನ ಸಮನ್ವಯ ಸಮಿತಿ ಸಭೆಯ ಕಾರ್ಯಸೂಚಿ ಮತ್ತು ಈ ಬಾರಿ ಸಭೆಯ ಬಗ್ಗೆ  ಮಾಹಿತಿ ನೀಡಿದ್ದಾರೆ. ಅಲ್ಲದೇ 4 ವರ್ಷದಲ್ಲಿ ರಾಜ್ಯ ಸರ್ಕಾರ ಮಾಡಿರುವ ಕಾರ್ಯಗಳ ಕುರಿತು ಸುಮಾರು 300 ಪುಟಗಳ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

28 ಜನ ಸದಸ್ಯರ ಸಮನ್ವಯ ಸಮಿತಿ ಸಭೆಗೆ ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಎಂ.ವಿ. ರಾಜಶೇಖರನ್‌, ಸಿ.ಕೆ.ಜಾಫ‌ರ್‌ ಷರೀಫ್, ಧರ್ಮಸಿಂಗ್‌ ಹಾಗೂ ಕೆ.ಎಚ್‌. ಮುನಿಯಪ್ಪ ಗೈರು ಹಾಜರಾಗಿದ್ದರು.

ಅಧ್ಯಕ್ಷರ ಬದಲಾವಣೆ ಕುರಿತು ಪ್ರಸ್ತಾಪ
ಅಧ್ಯಕ್ಷರ ಬದಲಾವಣೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆಂದು ತಿಳಿದು ಬಂದಿದ್ದು,  ಹೈಕಮಾಂಡ್‌ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಒಪ್ಪಿಕೊಂಡು ಕೆಲಸ ಮಾಡುತ್ತೇವೆ. ಆದರೆ, ಅನಗತ್ಯ ವಿಳಂಬದಿಂದ ಗೊಂದಲ ಹೆಚ್ಚಾಗುತ್ತದೆ ಎಂಬ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ. ವೀರಪ್ಪ ಮೊಯ್ಲಿ  ಕೂಡ ಅದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.  ಆದರೆ, ಮಾರ್ಗರೇಟ್‌ ಆಳ್ವಾ ಮಾತ್ರ ಈ ಸಂದರ್ಭದಲ್ಲಿ ಅಧ್ಯಕ್ಷರ ಬದಲಾವಣೆ ಸೂಕ್ತವಲ್ಲ.  ಈ ಬಗ್ಗೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ಗಮನಕ್ಕೆ ತರಬೇಕೆಂದು ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.

ಅರ್ಥವಾಗದಂತೆ ಮಾತನಾಡಿದ ಖಮರುಲ್‌
ಮಾಜಿ ಸಚಿವ ಖಮರುಲ್‌ ಇಸ್ಲಾಂ ಸಮನ್ವಯ ಸಮಿತಿ ಸಭೆಯಲ್ಲಿ ಸುಮಾರು ಅರ್ಧ ಗಂಟೆ ಮಾತನಾಡಿದರೂ ಅವರು ಯಾವ ವಿಷಯ ಮಾತನಾಡುತ್ತಿದ್ದಾರೆಂದು ಯಾರಿಗೂ ಅರ್ಥವಾಗದೇ ಸುಮ್ಮನೇ ಕೂಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತೆಂದು ಹೇಳಲಾಗಿದೆ. ಕೊನೆಗೆ ತಮ್ಮನ್ನು ಮಲ್ಲಿಕಾರ್ಜುನ ಖರ್ಗೆಯವರು ಸಮನ್ವಯ ಸಮಿತಿ ಸದಸ್ಯರನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದು ಮಾತ್ರ ಸಭೆಯಲ್ಲಿ ಕುಳಿತವರಿಗೆ ಅರ್ಥವಾಗಿದೆಯಂತೆ.

ಪತ್ರಿಕಾಗೋಷ್ಠಿಯಲ್ಲಿ ನಿದ್ದೆ ಮಾಡಿದ ಸಿಎಂ
ಪತ್ರಿಕಾಗೋಷ್ಠಿಯಲ್ಲಿ ವೇಣುಗೋಪಾಲ ಮಾತನಾಡುತ್ತಿರುವಾಗ ಸಿಎಂ ಸಿದ್ದರಾಮಯ್ಯ ತಮ್ಮ ಕನ್ನಡಕವನ್ನು ಟೇಬಲ್‌ ಮೇಲಿಟ್ಟು, ಕುರ್ಚಿಗೊರಗಿ ನಿದ್ರೆಗೆ ಜಾರಿದರು. ಅದನ್ನು ಗಮನಿಸಿದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ “ಪ್ಲೀಸ್‌ ಅಲರ್ಟ್‌ ಸಿಎಂ ಸರ್‌  ಈಸ್‌ ಸ್ಲಿàಪಿಂಗ್‌’ ಎಂಬ ಚೀಟಿಯನ್ನು ದಿನೇಶ್‌ ಗುಂಡೂರಾವ್‌ ಅವರಿಗೆ ರವಾನಿಸಿದರು. ತಕ್ಷಣ ದಿನೇಶ್‌ ಗುಂಡೂರಾವ್‌ ಸಿಎಂ ಸಿದ್ದರಾಮಯ್ಯಗೆ ಕನ್ನಡಕ ನೀಡುವ ನೆಪ ಮಾಡಿ ಎಬ್ಬಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next