Advertisement

ಮೈಸೂರು ಪಾಲಿಕೆ ಗದ್ದುಗೆಗೆ “ಕೈ’ಕಸರತ್ತು

01:12 PM Dec 11, 2017 | |

ಮೈಸೂರು: ಮೈಸೂರು ಮಹಾ ನಗರಪಾಲಿಕೆಯ ಈ ಅವಧಿಯ ಕೊನೆಯ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನ ನಗರಪಾಲಿಕೆಯಲ್ಲೇ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಇಲ್ಲದಂತಾಗಿರುವುದರಿಂದ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಈ ಕಡೆಯ ಅವಧಿಯಲ್ಲಾದರೂ ಶತಾಯ-ಗತಾಯ ಪಾಲಿಕೆಯನ್ನು ಕೈ ವಶಮಾಡಿಕೊಳ್ಳಬೇಕು ಎಂಬ ಪ್ರಯತ್ನಗಳು ನಡೆಯುತ್ತಿವೆ.

Advertisement

65 ಸದಸ್ಯ ಬಲದ ಮೈಸೂರು ಮಹಾ ನಗರಪಾಲಿಕೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ 20 ಸದಸ್ಯರನ್ನು ಹೊಂದಿದ್ದು, 13 ಸದಸ್ಯರನ್ನು ಹೊಂದಿರುವ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಅಧಿಕಾರ ಸೂತ್ರ ಹಿಡಿದಿದೆ. ನಗರ ಪಾಲಿಕೆ ಸದಸ್ಯರು ಮಾತ್ರ ಮತದಾನದಲ್ಲಿ ಭಾಗವಹಿಸುವುದಾದರೆ ಸರಳ ಬಹುಮತಕ್ಕೆ 33 ಸದಸ್ಯರ ಅವಶ್ಯಕತೆ ಇದೆ.

ಆದರೆ, ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಲೋಕಸಭೆ ಸದಸ್ಯರಿಗೆ ಮೇಯರ್‌-ಉಪ ಮೇಯರ್‌ ಚುನಾವಣೆಯಲ್ಲಿ ಮತದಾನದ ಹಕ್ಕು ಇರುವುದರಿಂದ ಅಧಿಕಾರ ಹಿಡಿಯಲು 37 ಸದಸ್ಯರ ಬೆಂಬಲ ಅಗತ್ಯ. ಆದರೆ, ಮೂವರು ಶಾಸಕರು, ಓರ್ವ ವಿಧಾನಪರಿಷತ್‌ ಸದಸ್ಯರೂ ಸೇರಿದಂತೆ ಕಾಂಗ್ರೆಸ್‌ನ ಒಟ್ಟು ಸಂಖ್ಯಾಬಲ 24 ಮಾತ್ರ. 

ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್‌ ಸ್ಥಾನದ ಮೀಸಲಾತಿ ಕಲ್ಪಿಸಿದರೆ ಕೊನೆ ಅವಧಿಯಲ್ಲಾದರೂ ಪಾಲಿಕೆ ಗದ್ದುಗೆ ಹಿಡಿಯಬಹುದು ಎಂಬ ಲೆಕ್ಕಾಚಾರ ಸೂತ್ರವನ್ನು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪ್ರವಾಸ ಹೊರಡಲಿರುವುದರಿಂದ ಅದಕ್ಕೂ ಮುನ್ನ ಮೇಯರ್‌-ಉಪ ಮೇಯರ್‌ ಸ್ಥಾನಗಳ ಮೀಸಲಾತಿ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್‌ ಸ್ಥಾನ ಮೀಸಲಾದರೆ ಕಾಂಗ್ರೆಸ್‌ ನಿರಾಯಾಸವಾಗಿ ಪಾಲಿಕೆಯ ಗದ್ದುಗೆ ಹಿಡಿಯಲಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕಲ್ಪಿಸಿದರೆ ಜೆಡಿಎಸ್‌-ಬಿಜೆಪಿ ಮೈತ್ರಿಯೇ ಮುಂದುವರಿಯುವ ಸಾಧ್ಯತೆ ಇದೆ. 

Advertisement

ಮೀಸಲಾತಿ ಅಸ್ತ್ರ ಪ್ರಯೋಗಿಸುತ್ತಾ ಕಾಂಗ್ರೆಸ್‌: ಕಾಂಗ್ರೆಸ್‌ಗೆ ಎಸ್‌ಡಿಪಿಐ ಮೂವರು, ಪಕ್ಷೇತರರಾದ ಶ್ರೀಕಂಠಯ್ಯ ಹಾಗೂ ಸುಹೇಲ್‌ ಬೇಗ್‌ ಗುರುತಿಸಿಕೊಂಡರೂ ಸರಳ ಬಹುಮತಕ್ಕೆ ಹತ್ತಿರವಾಗುವುದಿಲ್ಲ. ಹೀಗಾಗಿ ಇನ್ನುಳಿದ ಐವರು ಪಕ್ಷೇತರರನ್ನೂ ಸೆಳೆಯಲು ಪಾಲಿಕೆ ಸ್ಥಾಯಿ ಸಮಿತಿಗಳಲ್ಲಿ ಸೂಕ್ತ ಸ್ಥಾನ ನೀಡುವ ಆಮಿಷ ಒಡ್ಡುವ ಮೂಲಕ ತನ್ನತ್ತ ಸೆಳೆಯಲು ಕಾಂಗ್ರೆಸ್‌ ಮುಖಂಡರು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೂ, ಇನ್ನೂ 2 ಮತಗಳ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್‌ ಅಂತಿಮವಾಗಿ ಮೀಸಲಾತಿ ಅಸ್ತ್ರ ಪ್ರಯೋಗಿಸಲು ಹೊರಟಿದೆ.

Advertisement

Udayavani is now on Telegram. Click here to join our channel and stay updated with the latest news.

Next