Advertisement
ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಇದು ಕಾಂಗ್ರೆಸ್ ಪಕ್ಷದ ತೀರ್ಮಾನ. ಜನರ ಆರೋಗ್ಯ ಪ್ರಾಣ ಕಾಪಾಡಲು ನಮ್ಮ ಹೊಣೆಗಾರಿಕೆ ನಿಭಾಯಿಸಲಿದ್ದೇವೆ ಎಂದಿದ್ದಾರೆ.
Related Articles
Advertisement
ನಮ್ಮ ಪಕ್ಷದ ಎಲ್ಲಾ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ರೂ.1 ಕೋಟಿಯಂತೆ ಒಟ್ಟು ರೂ.100 ಕೋಟಿ ಹಣವನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲು ತೀರ್ಮಾನಿಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ದೇಶದ ಪ್ರತಿಯೊಬ್ಬರಿಗೂ ಕೊರೊನಾ ವ್ಯಾಕ್ಸಿನ್ ನೀಡುವುದೇ ಸೋಂಕು ತಡೆಗಟ್ಟಲು ಇರುವ ಪರಿಣಾಮಕಾರಿ ಮಾರ್ಗವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟರೊಳಗೆ ಕನಿಷ್ಠ ಅರ್ಧದಷ್ಟು ಜನರಿಗೆ ವ್ಯಾಕ್ಸಿನ್ ನೀಡಿದ್ದರೆ ಕೊರೊನಾ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ಬಂದಿರುತ್ತಿತ್ತು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ಇಂದು ಜನ ವ್ಯಾಕ್ಸಿನ್ ಗಾಗಿ ಆಸ್ಪತ್ರೆಗಳಿಗೆ ಅಲೆಯುವ ಪರಿಸ್ಥಿತಿ ಬಂದಿದೆ. ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ವ್ಯಾಕ್ಸಿನ್ ನೀಡಿಕೆ ಸಂಬಂಧ ಎರಡೂ ಸರ್ಕಾರಗಳಿಗೆ ಛೀಮಾರಿ ಹಾಕಿವೆ. ಇಷ್ಟಾದರೂ ಬಿಜೆಪಿ ನಾಯಕರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ವ್ಯಾಕ್ಸಿನ್ ಬರಲು ಇನ್ನು ಹಲವು ತಿಂಗಳುಗಳಾಗಬಹುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಕೊರೊನಾ 3ನೇ ಅಲೆ ಬರಲಿದ್ದು, ಅದರ ಬಗೆಗಿನ ತಜ್ಞರ ಅಭಿಪ್ರಾಯವನ್ನು ಗಮನಿಸಿದರೆ ಮುಂದಿನ ದಿನಗಳ ಬಗ್ಗೆ ಆತಂಕವಾಗುತ್ತದೆ ಎಂದರು.
ಕೊವಿಶೀಲ್ಡ್ ವ್ಯಾಕ್ಸಿನ್ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಪದೇ ಪದೇ ತನ್ನ ಮಾರ್ಗಸೂಚಿಯನ್ನು ಬದಲಾವಣೆ ಮಾಡುತ್ತಿದೆ. ಮೊದಲ ಹಾಗೂ ಎರಡನೇ ಡೋಸ್ ನಡುವಿನ ಅಂತರ 6 ವಾರ ಎಂದು ಈ ಹಿಂದೆ ಹೇಳಿತ್ತು, ಈಗ ಅದನ್ನು 12 ರಿಂದ 16 ವಾರಗಳಿಗೆ ಏರಿಸಿ ಹೊಸ ಮಾರ್ಗಸೂಚಿ ಹೊರಡಿಸಿದೆ.
ವ್ಯಾಕ್ಸಿನ್ ನೀಡಿಕೆ ವಿಚಾರದಲ್ಲಿ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿಕೊಳ್ಳುತ್ತಿದೆ. ಇದೊಂದು ವೈಜ್ಞಾನಿಕ ಪ್ರಕ್ರಿಯೆ, ವ್ಯಾಕ್ಸಿನ್ ತಯಾರಿಕಾ ಹಂತದಲ್ಲಿಯೇ ಎರಡು ಡೋಸ್ ಗಳ ನಡುವಿನ ದಿನಗಳ ಅಂತರವನ್ನೂ ನಿರ್ಧರಿಸಲಾಗಿರುತ್ತದೆ, ಹಾಗಿದ್ದಾಗ ಪದೇ ಪದೇ ಬದಲಾವಣೆ ಹೇಗೆ ಸಾಧ್ಯ? ಸರ್ಕಾರ ಗಂಟೆಗೊಂದು, ದಿನಕ್ಕೊಂದು ಮಾರ್ಗಸೂಚಿ ಹೊರಡಿಸುವ ಮೂಲಕ ಜನರನ್ನು ಗೊಂದಲಕ್ಕೆ ದೂಡುತ್ತಿದೆ ಎಂದರು.
18 ರಿಂದ 45ರ ವಯೋಮಿತಿಯ ಜನರ ವ್ಯಾಕ್ಸಿನ್ ಗೆ ರಾಜ್ಯ ಸರ್ಕಾರಗಳೇ ಹಣ ಹಾಕಬೇಕು ಎಂದು ಕೇಂದ್ರ ಸರ್ಕಾರ ಹೇಳಿರುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ. ಕೇಂದ್ರ ಸರ್ಕಾರವೇ ಇಡೀ ದೇಶದ ಜನತೆಗೆ ಉಚಿತವಾಗಿ ವ್ಯಾಕ್ಸಿನ್ ನೀಡುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.