Advertisement

ಕಾಂಗ್ರೆಸ್ ಬತ್ತಳಿಕೆಯಲ್ಲಿ ಐದಾರು ಅಸ್ತ್ರ; ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸೂತ್ರ

09:32 AM Sep 12, 2022 | Team Udayavani |

ಬೆಂಗಳೂರು: ಇಂದಿನಿಂದ ಆರಂಭಗೊಳ್ಳಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅಬ್ಬರದ ಹೋರಾಟ ನಡೆಸಲು ಕಾಂಗ್ರೆಸ್ ಹಾಗೂ‌ ಸಿದ್ಧತೆ ಮಾಡಿಕೊಂಡಿದ್ದು, ಹತ್ತು ದಿನಗಳ ಅಧಿವೇಶನ ಗದ್ದಲದಲ್ಲೇ ಕೊನೆಗೊಳ್ಳುವ ಸಾಧ್ಯತೆ ಇದೆ.

Advertisement

ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಇಂದಿನ ಕಲಾಪ ಕೇವಲ ಸಂತಾಪಕ್ಕೆ ಸೀಮಿತವಾಗಿದ್ದು, ಬಳಿಕ ಕಲಾಪ ಸಲಹಾ ಸಮಿತಿ ಸಭೆ ನಡೆಯಲಿದೆ. ಅಲ್ಲಿ ಮುಂದಿನ ಒಂಬತ್ತು ದಿನಗಳ ಅಜೆಂಡಾ ನಿಗದಿಯಾಗಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಂಗಳವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಸಹ ಸಾಕಷ್ಟು ವಿಸ್ತೃತವಾಗಿ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆ ಹೆಣೆಯುವ ಕಾರ್ಯ ಆಗಲಿದೆ. ಆದರೆ ಮಂಗಳವಾರ ಬೆಳಗ್ಗೆಯೇ ಹೋರಾಟದ ಪ್ರಮುಖ ಅಸ್ತ್ರವೊಂದನ್ನು ಪ್ರಯೋಗಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಮುಂದಿರುವ ಆಯ್ಕೆಗಳು

ಕಾಂಗ್ರೆಸ್ ಬಳಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಾಕಷ್ಟು ಅಸ್ತ್ರಗಳಿವೆ. ಪ್ರಮುಖವಾಗಿ ಬೆಂಗಳೂರು ಮಹಾನಗರದಲ್ಲಿ ಮಳೆಹಾನಿಗೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಒತ್ತಡ ಹೇರುವುದು, ಸರ್ಕಾರದ 40% ಕಮಿಷನ್ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿಯುವುದು, ರಾಜ್ಯಾದ್ಯಂತ ಮಳೆ ಹಾನಿಯಿಂದಾಗಿ ಉಂಟಾಗಿರುವ ಸಮಸ್ಯೆಗೆ ಸರ್ಕಾರ ಕೈಗೊಂಡ ಕ್ರಮಗಳ ವಿವರ ಕೇಳುವ ಜತೆಗೆ ಇಂಧನ, ಕಂದಾಯ, ಗೃಹ, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆ ಇದೆ. ಮಂಗಳವಾರ ಸಂಜೆ ಶಾಸಕಾಂಗ ಸಭೆಯಲ್ಲಿ ಯಾವ ವಿಚಾರವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು, ಯಾರ್ಯಾರು ಯಾವ ವಿಚಾರದ ಮೇಲೆ ಚರ್ಚೆ ಕೈಗೊಳ್ಳಬೇಕೆಂದು ತೀರ್ಮಾನವಾಗಲಿದ್ದು, ಮಂಗಳವಾರ ಬೆಳಗ್ಗೆ ಅಧಿವೇಶನದಲ್ಲಿ ಅದರಲ್ಲಿಯೂ ಉಭಯ ಸದನಗಳಲ್ಲಿ ಬೆಂಗಳೂರು ನಗರ ಮುಳುಗಿರುವ ವಿಚಾರವನ್ನು ಪ್ರಸ್ತಾಪಿಸಿ ಉತ್ತರ ಕೇಳುವ ಸಾಧ್ಯತೆ ಇದೆ. ಸೂಕ್ತ ಮಾಹಿತಿ ಸಿಗದಿದ್ದರೆ ಗದ್ದಲದ ವಾತಾವರಣ ಸೃಷ್ಟಿಸುವ, ಸದನದ ಒಳಗೆ-ಹೊರಗೆ ಹೋರಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸರ್ಕಾರದ ವಿರುದ್ಧ ಮುಗಿಬೀಳಲು ಸಿಗುವ ಪ್ರತಿಯೊಂದು ಅವಕಾಶವನ್ನೂ ಸದ್ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿರುವ ಕಾಂಗ್ರೆಸ್ ಈ ಸಾರಿ ಕಲಾಪದಲ್ಲಿ ಗೃಹ, ಕಂದಾಯ, ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸುವ ಸಾಧ್ಯತೆ ಹೆಚ್ಚಾಗಿದೆ. ಎಎಸ್ಐ ನೇಮಕ ಅಕ್ರಮ, ರುಪ್ಸಾ ಸಂಸ್ಥೆ ಪ್ರಧಾನಿಗೆ ಬರೆದ ಪತ್ರ, ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ವರ್ಷ ಕಳೆದರೂ ಇದಕ್ಕೆ ಒಂದು ಉತ್ತರ ಸಿಗದಿರುವುದು, ಭ್ರಷ್ಟಾಚಾರ, ನಗರ ಸೇರಿದಂತೆ ರಾಜ್ಯಾದ್ಯಂತ ಮಳೆಯಿಂದಾಗಿ ಆಗುತ್ತಿರುವ ಅನಾಹುತ, ರಾಜ್ಯಾದ್ಯಂತ ಉಂಟಾಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ಘೋಷಿಸದಿರುವುದು, ಬೆಂಗಳೂರು-ಮೈಸೂರು ಹೆದ್ದಾರಿ ಅವ್ಯವಸ್ಥೆಯಿಂದ ಜನ ಪಟ್ಟ ಪಾಡು ಇನ್ನೂ ಹಲವು ವಿಚಾರವನ್ನು ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನವನ್ನು ಕಾಂಗ್ರೆಸ್ ಮಾಡಲು ತೀರ್ಮಾನಿಸಿದೆ.

Advertisement

ರಾಜ್ಯ ಸರ್ಕಾರ ತಮ್ಮ ವಾದ, ಆರೋಪಗಳಿಗೆ ಚರ್ಚಿಸುವ ಅವಕಾಶ ನೀಡದಿದ್ದರೆ ಏನು ಮಾಡಬೇಕೆಂಬುದನ್ನು ಸಹ ಕಾಂಗ್ರೆಸ್ ನಾಯಕರು ತಂತ್ರಗಾರಿಕೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next