ಸದಾಶಿವನಗರದಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶೋಕಾಸ್ ನೋಟಿಸ್ ನೀಡುವ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನೋಟಿಸ್ ಕೊಡುವುದು ಅಧ್ಯಕ್ಷರು ಮಾಡುವ ಕೆಲಸ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿ ಅಂತ ಹೇಳಬೇಕಾಗುತ್ತದೆ. ಈಗಲೂ ಅದೇ ರೀತಿ ಅಧ್ಯಕ್ಷರು ಹೇಳಿದ್ದಾರೆ . ಅವರು ಏನೇ ತೀರ್ಮಾನ ತೆಗೆದುಕೊಂಡರೂ ಕೇಳುತ್ತೇವೆ. ಯಾವ ಶಿಸ್ತು ಉಲ್ಲಂಘನೆ ಆಗಿದೆ ಅಂತ ಹೇಳಬೇಕು. ನಂತರ ಮುಂದಿನ ಬೆಳವಣಿಗೆ ಅಧ್ಯಕ್ಷರಿಗೆ ಬಿಟ್ಟಿದ್ದು’ ಎಂದು ತಿಳಿಸಿದರು.
ಸತ್ಯಶೋಧನಾ ಸಮಿತಿ ರಚನೆ ವಿಚಾರ ಕೇಳಿದಾಗ, “ರಾಜ್ಯಮಟ್ಟದಲ್ಲಿ ಸಮಿತಿ ಮಾಡುವುದು ಸರ್ವೇಸಾಮಾನ್ಯ. ಅಧ್ಯಕ್ಷರು ಈ ಸಮಿತಿ ಮಾಡುತ್ತಾರೆ. ಯಾಕೆಂದರೆ, ಅವರಿಗೂ ಜವಾಬ್ದಾರಿ ಇದೆಯಲ್ಲವೇ? ಎಐಸಿಸಿ ಮಾಡುವ ಸತ್ಯ ಶೋಧನಾ ಸಮಿತಿ ಬೇರೆ ಆಗಿದೆ. ಆ ಸಮಿತಿಯು ಜುಲೈ 10 ಅಥವಾ 12ರಂದು ರಾಜ್ಯಕ್ಕೆ ಭೇಟಿ ನೀಡಲಿದೆ.
ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭಾಷಣಕ್ಕೆ ಬಿಜೆಪಿ ವಿರೋಧದ ಬಗ್ಗೆ ಕೇಳಿದಾಗ, “ಎಲ್ಲರನ್ನೂ, ಎಲ್ಲ ವರ್ಗದವರನ್ನೂ ಸಮಾನವಾಗಿ ಕರೆದೊಯ್ಯಬೇಕು. ಇದು ಹಿಂದೂ ಧರ್ಮದ ಸಾರಾಂಶ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದೂಗಳಲ್ಲ ಅಂದಿದ್ದಾರೆ. ಇದು ಯಾರಿಗೆ ಅನ್ವಯ ಆಗಬೇಕೋ ಆಗುತ್ತೆ. ಬಿಜೆಪಿಯವರಿಗೆ ಅನ್ವಯ ಆಗೋದಾದರೆ ಅವರಿಗೂ ಆಗುತ್ತೆ. ಆ ಅರ್ಥದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ’ ಎಂದು ತಿರುಗೇಟು ನೀಡಿದರು.
ಕೇಂದ್ರದ ಹೊಸ ಕಾನೂನು ಗೊಂದಲ ಕುರಿತು ಪ್ರತಿಕ್ರಿಯಿಸಿ, “ರಾಜ್ಯದಲ್ಲಿ 66 ಕೇಸ್ ದಾಖಲಾಗಿವೆ. ಈ ಪೈಕಿ ಬೆಂಗಳೂರಿನಲ್ಲಿ 20 ಕೇಸ್ ದಾಖಲಾಗಿವೆ. ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ. ಕೆಲವು ಅಂಶಗಳು ಸರಿಯಾಗಿಲ್ಲ. ಹಿಂದೆ ಕೆಲವು ಸಂದರ್ಭಗಳಲ್ಲಿ ಕೇಸ್ ದಾಖಲು ಇತ್ತು. ಈಗ ಹೊಸ ಕಾನೂನುಗಳಲ್ಲಿ ಅವಕಾಶವಿಲ್ಲ. ಹೀಗೆ ಕೆಲವು ಗೊಂದಲಗಳಿವೆ. ಅವುಗಳ ಬಗ್ಗೆ ಚರ್ಚಿಸಿ ಕೇಂದ್ರದ ಗಮನಕ್ಕೆ ತರಲಾಗುವುದು’ ಎಂದರು.
Advertisement