ತೀರ್ಥಹಳ್ಳಿ : ಮೇ 10ರಂದು ನಡೆದ ಚುನಾವಣೆಯಲ್ಲಿ ಒಂದು ಕಾರ್ಡ್ ಗೆದ್ದಿದೆ. ಕಾಂಗ್ರೆಸ್ ಪಕ್ಷ ಗೆದ್ದಿರುವುದಲ್ಲ ಗ್ಯಾರೆಂಟಿ ಕಾರ್ಡ್ ಗೆದ್ದಿರುವುದು ಕಾಂಗ್ರೆಸ್ ಅವರ ಒಂದು ಮ್ಯಾಜಿಕ್ ಮಾಡಿದ್ರು ಒಂದು ಗುಡ್ಡಕ್ಕೆ ದಾರವನ್ನ ಕಟ್ಟಿ ಎಳೆಯುವ ಪ್ರಯತ್ನವನ್ನ ಮಾಡಿದ್ರು ಬಂದರೆ ಗುಡ್ಡ ಹೋದರೆ ದಾರ ಎಂಬಂತೆ ಬಂದರೆ ಸರ್ಕಾರ ಬರಬೇಕು ಹೋದರೆ ಒಂದು ಕಾರ್ಡ್ ಹೋಗುತ್ತಲ್ಲ ಎಂಬ ಭರವಸೆಯಿಂದ ಕಾರ್ಡ್ ಒಂದನ್ನು ಹಂಚಿದ್ದರು ಅವರ ಅದೃಷ್ಟಕ್ಕೆ ಸರ್ಕಾರ ಬಂದಿದೆ. ಈಗ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿಚಾರವಾಗಿ ಹಾಗೂ ವಿದ್ಯುತ್ ಬಿಲ್ ಏರಿಕೆಯ ವಿರುದ್ಧವಾಗಿ ಪ್ರತಿಭಟನಾ ಮೆರವಣಿಗೆ ನೆಡೆಸಿ ನಂತರ ಸಭೆಯಲ್ಲಿ ಮಾತನಾಡಿದ ಅವರು ಚುನಾವಣೆಗೂ ಮೊದಲು ನಾವು ಈ ಎಲ್ಲಾ ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್ ನಲ್ಲಿಯೇ ಪೂರೈಸುತ್ತೇವೆ ಎಂದಿದ್ದರು. ಆದರೆ ಚುನಾವಣೆ ಮುಗಿದು ಒಂದು ತಿಂಗಳಾದರೂ ಇಲ್ಲಿಯವರೆಗೆ ಯಾವುದೇ ಜಾರಿಯನ್ನು ಕೂಡ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರಲಿಲ್ಲ. ಮಲೆನಾಡ ಭಾಗದಲ್ಲಿ ಬಸ್ ಗಳು ಎಲ್ಲೂ ಇಲ್ಲ ಆದರೆ ಆ ಬಸ್ ಗಳಿಗೆ ಸ್ಮಾರ್ಟ್ ಕಾರ್ಡ್ ಮಾಡಿಸಲು ಹೊರಟಿದ್ದಾರೆ. ಮಹಿಳೆ ಎಂದು ತೋರಿಸಲು ಒಂದು ಕಾರ್ಡ್ ಬೇಕಂತೆ. ಹೆಣ್ಣುಮಕ್ಕಳನ್ನು ಗುರುತಿಸಲು ಇರಲಾರದಂತಹ ಸರ್ಕಾರ ಎಂದರು.
ಮಲೆನಾಡ ಭಾಗಗಳಲ್ಲಿ ಸರಕಾರಿ ಬಸ್ ವ್ಯವಸ್ಥೆ ಇಲ್ಲ. ಹಾಗಾಗಿ ಈ ಭಾಗದ ಮಹಿಳೆಯರಿಗೆ ಓಡಾಡಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಖಾಸಗಿ ಬಸ್ ಗಳಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು. ನಾನು ಸಚಿವನಾಗಿದ್ದಾಗ ನಾಲ್ಕೈದು ಕಡೆ ಓಡಾಡಲು ಸರ್ಕಾರಿ ಬಸ್ ಗಳನ್ನು ವ್ಯವಸ್ಥೆ ಮಾಡಿದ್ದೆ. ಅವು ಕೆಲವೊಂದು ಓಡಾಡುತ್ತೇವೆ, ಕೆಲವೊಂದು ಓಡಾಡುತ್ತಿಲ್ಲ. ಹಾಗಾಗಿ ಈ ಭಾಗದ ಮಹಿಳೆಯರಿಗೆ ಓಡಾಡಲು ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಬಿಲ್ ಬೆಲೆ ಏರಿಕೆ ಆಗಿರುವುದು ಬಿಜೆಪಿ ಸರ್ಕಾರ ಮಾಡಿದ್ದು ಎಂದು ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿ ಮಾಡಿದ್ದಂತಹ ಮತಾಂತರ ನಿಷೇಧ ಕಾಯ್ದೆ, ಪಠ್ಯಪುಸ್ತಕ ಪರಿಷ್ಕರಣೆಯನ್ನು ಬದಲಾಯಿಸಿದ್ದೀರಿ ಹಾಗೆಯೇ ವಿದ್ಯುತ್ ಬಿಲ್ ಏರಿಕೆಯನ್ನು ಬದಲಾಯಿಸಿ ಎಂದರು. 200 ಯೂನಿಟ್ ವಿದ್ಯುತ್ ಉಚಿತ, ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣ ಉಚಿತ, ಪದವೀಧರರಿಗೆ 3000, ಹತ್ತು ಕೆಜಿ ಅಕ್ಕಿ ಉಚಿತ, ಗ್ಯಾಸ್ ಬೆಲೆ 500 ಕ್ಕೆ ಇಳಿತ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ಹೀಗೆ ಹಲವು ಯೋಜನೆಗಳನ್ನು ನೀಡಿದರೆ ಕಾಂಗ್ರೆಸ್ ನನ್ನು ಗೆಲ್ಲಿಸದೆ ಬಿಜೆಪಿ ಗೆಲ್ಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬಿಪಿಎಲ್ ಕಾರ್ಡ್ ತರ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ನೀಡಿ ಇಲ್ಲದಿದ್ದರೆ ಆ 10 ಕೆಜಿ ಅಕ್ಕಿಯ ಹಣವನ್ನ ಪ್ರತಿಯೊಬ್ಬರ ಬ್ಯಾಂಕ್ ಅಕೌಂಟ್ ಗೆ ಹಾಕಿ. ನೀವು ಬಡವರನ್ನು ಉದ್ಧಾರ ಮಾಡಲು ತಾನೇ ಈ ಎಲ್ಲಾ ಸ್ಕೀಮ್ ಗಳನ್ನು ತಂದಿದ್ದು, ಹಕ್ಕಿಕೊಡಲಾಗಲಿಲ್ಲ ಎಂದರೆ ಹಣವನ್ನು ಹಾಕಿ, ನೀವು ಕರ್ನಾಟಕ ರಾಜ್ಯದ ರೈತರ ಬಳಿ ಅಕ್ಕಿಯನ್ನು ತೆಗೆದುಕೊಳ್ಳದೆ ಬೇರೆ ರಾಜ್ಯದಿಂದ ಅಕ್ಕಿ ತೆಗೆದುಕೊಂಡು ಕಮಿಷನ್ ಹೊಡೆಯಲು ಪ್ರಯತ್ನ ಮಾಡುತ್ತಿದ್ದೀರಾ ಎಂದು ಆರೋಪಿಸಿದರು.
ನಾವು ವಿರೋಧ ಪಕ್ಷದ ಸ್ಥಾನದಲ್ಲಿ 66 ಜನ ಇದ್ದೇವೆ. ಎಲ್ಲಾ ಸಂದರ್ಭದಲ್ಲೂ ವಿರೋಧ ಪಕ್ಷದವರಾಗಿಯೇ ಕೆಲಸ ಮಾಡಿದ ಅನುಭವ ನಮಗೆ ಇದೆ. ಯಾರು ನಮಗೆ ಪಾಠ ಹೇಳಿಕೊಡಬೇಕಾಗಿಲ್ಲ. ನಮಗೆ ಆಡಳಿತ ಪಕ್ಷ ಆಕಸ್ಮಿಕ. ಬಹಳ ವರ್ಷದಿಂದ ವಿರೋಧ ಪಕ್ಷ ನಮಗೆ ಕಾಯಂ ಆಗಿದೆ. ವಿರೋಧ ಪಕ್ಷದ ನಾಯಕರಾಗಿ ಹೇಗೆ ಕೆಲಸ ಮಾಡಬೇಕು ಎಂದು ತೋರಿಸುತ್ತೇವೆ. ನಿಮಗೆ ಆಡಳಿತ ನಡೆಸಲು ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ನವೀನ್ ಹೆದ್ದೂರ್, ಚಂದವಳ್ಳಿ ಸೋಮಶೇಖರ್, ಬಾಳೆಬೈಲು ರಾಘವೇಂದ್ರ, ಗೀತಾ ಸದಾನಂದ ಶೆಟ್ಟಿ, ಸವಿತಾ ಉಮೇಶ್, ಡಾಕಮ್ಮ, ರಕ್ಷಿತ್ ಮೇಗರವಳ್ಳಿ, ಕುಕ್ಕೆ ಪ್ರಶಾಂತ್, ಯಶೋಧ ಮಂಜುನಾಥ್, ಪೂರ್ಣೇಶ್ ಪೂಜಾರಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.