ಕೋಲಾರ: ದೇಶದಲ್ಲಿನ ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ಯಾವುದೇ ಬದಲಾವಣೆಗಳು ಅಗಲ್ಲ, ಸಮ್ಮಿಶ್ರ ಸರ್ಕಾರ ಅಧಿಕಾರ ಮುಂದುವರಿಸಿಕೊಂಡು ಹೋಗುತ್ತದೆ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಕಿರುಕುಳ ನೀಡುತ್ತಿದ್ದಾರೆ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಒಬ್ಬರ ಮೇಲೆಯೇ ಹೇಳುತ್ತಿಲ್ಲ, ಇಡೀ ಕಾಂಗ್ರೆಸ್ ಪಕ್ಷದವರಿಂದ ಆಗುತ್ತಿದೆ ಎಂದು ಇತ್ತೀಚಿನ ಬೆಳವಣಿಗೆಳ ಬಗ್ಗೆ ಸ್ಪಷ್ಟೀಕರಣ ನೀಡಿದರು.
ಸಿದ್ದು ವಿರುದ್ಧ ಬೇಸರ: ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಜನರಿಗೆ ಕಾರ್ಯಕ್ರಮಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕ್ರಮಕೈಗೊಳ್ಳದೇ ಇರುವುದು ಬೇಸರ ತಂದಿದೆ. ಹಿಂದಿನ ಸರ್ಕಾರವನ್ನು ನಡೆಸಿ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟು ಕೆಲಸ ಮಾಡಬೇಕಾಗಿತ್ತು. ಯಾಕೆ ಮಾಡುತ್ತಾ ಇಲ್ಲ ಎಂದು ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಮತ್ತು ಸಿದ್ದರಾಮಯ್ಯ ನಡುವೆ ವ್ಯಕ್ತಿಗತವಾಗಿ ಯಾವುದೇ ದ್ವೇಷವಿಲ್ಲ, ನನಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲದ ಬಗ್ಗೆ ಪ್ರತಿಯೊಬ್ಬರು ಪ್ರಶ್ನಿಸಬಹುದು ಎಂದು ಹೇಳಿದರು.
ಸಮನ್ವಯ ಸಮಿತಿ ಕಾರ್ಯಕ್ರಮ ರೂಪಿಸಲಿ: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷದ ಅಧ್ಯಕ್ಷನಾಗಿದ್ದೇನೆ. ರೀತಿ, ನೀತಿ, ಸಿದ್ಧಾಂತ, ಕಾರ್ಯಕ್ರಮಗಳ ಬಗ್ಗೆ ಬರೆದುಕೊಳ್ಳಲಾಗುತ್ತಿಲ್ಲ. ಸಮನ್ವಯ ಸಮಿತಿಯು ವ್ಯಕ್ತಿ ಕೇಂದ್ರಿತ ಸಮಿತಿಯಲ್ಲ, ಎರಡೂ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಅಧಿಕಾರ ನಡೆಸಲು ಅವಕಾಶ ಕಲ್ಪಿಸುವುದು ಅವರ ಜವಾಬ್ದಾರಿಯಾಗಬೇಕು. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಚಿವ ಸಂಪುಟದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಮರ್ಪಕವಾಗಿ ಜನಕ್ಕೆ ಹೇಗೆ ತಲುಪಿಸಬೇಕು ಎಂದು ಸಮನ್ವಯ ಸಮಿತಿ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಸಲಹೆ ನೀಡಿದರು.
ಹಿಂದೆ 23 ಪಾರ್ಟಿಗಳು ಸೇರಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸೋನಿಯಾಗಾಂಧಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಆದರೆ, ರಾಜ್ಯದಲ್ಲಿ ಯಾಕೆ ಕಾರ್ಯಕ್ರಮಗಳನ್ನು ಇರುವರೆಗೂ ರೂಪಿಸಲಾಗುತ್ತಿಲ್ಲ, ಸಮಿತಿಯಿಂದ ಕಾಂಗ್ರೆಸ್, ಜೆಡಿಎಸ್, ಜನಕ್ಕೆ ಎಷ್ಟು ಮಾತ್ರ ಲಾಭವಾಗುತ್ತಿದೆ ಎಂಬು ದು ಪ್ರಶ್ನೆಯಾಗಿದೆ ಎಂದು ಹೇಳಿದರು.