Advertisement

ಕಾಂಗ್ರೆಸ್‌ನಲ್ಲೂ ಅಡ್ಜಸ್ಟ್‌ಮೆಂಟ್‌ ಚರ್ಚೆ

12:50 AM Jan 16, 2021 | Team Udayavani |

ಬೆಂಗಳೂರು: ಅಡ್ಜಸ್ಟ್‌ ಮೆಂಟ್‌ ರಾಜಕಾರಣ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿಯ  ಯತ್ನಾಳ್‌, ಎಚ್‌.ವಿಶ್ವನಾಥ್‌ ಸಿಡಿಸಿರುವ  “ಬಾಂಬ್‌’ ಕಾಂಗ್ರೆಸ್‌ ಹೈಕಮಾಂಡ್‌  ತಲುಪಿದೆ.

Advertisement

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು  ಯಡಿಯೂರಪ್ಪ ಜತೆ ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪೂರಕವಾಗಿ ಆಡಿಯೋ ಹಾಗೂ ವೀಡಿಯೋ ಕ್ಲಿಪಿಂಗ್‌ ಅನ್ನು ಹಿರಿಯ ನಾಯಕರು ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಆಪರೇಷನ್‌ ಕಮಲ ಕಾರ್ಯಾಚರಣೆ ಮೂಲಕ ಕಾಂಗ್ರೆಸ್‌ನ ಶಾಸಕರನ್ನು ಸೆಳೆದು ಸರಕಾರ ರಚನೆ ಮಾಡಿರುವ ಬಿಜೆಪಿ ವೈಫ‌ಲ್ಯಗಳ ವಿರುದ್ಧ ಪ್ರತಿ ಹೆಜ್ಜೆಯಲ್ಲೂ ತಪ್ಪು ಹುಡುಕಿ ಹೋರಾಟ ಮಾಡಬೇಕಿತ್ತು. ಆದರೆ, ಇಬ್ಬರಲ್ಲೂ ಸಮನ್ವಯತೆ ಇಲ್ಲ. ಜತೆಗೆ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಜತೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಗಟ್ಟಿ ಧ್ವನಿ ಎತ್ತುತ್ತಿಲ್ಲ ಎಂಬ ಬಗ್ಗೆ ದೂರನ್ನೂ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿನೋಟಿಫಿಕೇಷನ್‌ ಪ್ರಕರಣ ಸಂಬಂಧ  ಯಡಿಯೂರಪ್ಪ ವಿರುದ್ಧ ಹೈಕೋರ್ಟ್‌ ನೀಡಿದ ತೀರ್ಪು ಸಹಿತ ಸರಕಾರದ ವೈಫ‌ಲ್ಯಗಳ ವಿರುದ್ಧ ಹೋರಾಟ ಮಾಡಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ ಎಂಬ ಬೇಸರ ಪಕ್ಷದ ವಲಯದಲ್ಲೇ ಕೇಳಿಬರುತಿತ್ತು. ಈಗ ಹೊಂದಾಣಿಕೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ಯಿಂದ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಕುಗ್ಗಲಿದೆ ಎಂದು ದೂರಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿಗೆ ಚುನಾವಣೆ ನಡೆಸುವ ಸಂಬಂಧವೂ ಬೆಂಗಳೂರಿನ ಶಾಸಕರು ಬಿಜೆಪಿಯ ಜತೆಗೂಡಿದ್ದರು. ಬಿಬಿಎಂಪಿ ಕಾಯ್ದೆ ರಚನೆಗೆ ಒತ್ತಾಸೆಯಾಗಿ ನಿಂತು ಅದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ-ಸೂಚನೆ ನೀಡಿದರು. ಹೀಗಾಗಿಯೇ ಚುನಾವಣೆ ಮುಂದಕ್ಕೆ ಹೋಗುವಂತಾಗಿದೆ. ಈ ವಿಚಾರದಲ್ಲಿ ರಾಜ್ಯ ನಾಯಕರ ಗಮನಕ್ಕೆ ತಂದರೂ  ಮೌನ ವಹಿಸಿದ್ದರು. ಇವರಿಗೂ ಚುನಾವಣೆ ನಡೆಯುವುದು ಬೇಕಿರಲಿಲ್ಲ ಎಂಬುದು ಈಗ ಅರ್ಥವಾಗುತ್ತಿದೆ ಎಂದು ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಡಿಕೆಶಿಯಿಂದಲೇ ದಾಖಲೆ? :

ಸಿ.ಪಿ. ಯೋಗೇಶ್ವರ್‌ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದು, ಅವರನ್ನು ತತ್‌ಕ್ಷಣವೇ ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಗೆ  ನಿರ್ದೇಶನ ನೀಡುವಂತೆ  ಕೋರಿ ಎಂ.ಪಿ.ರೇಣುಕಾಚಾರ್ಯ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಿ ದೂರು ನೀಡಿದ್ದಾರೆ.  ಇದಕ್ಕೆ ಪೂರಕವಾಗಿ  ಯೋಗೇಶ್ವರ್‌ ವಿರುದ್ಧದ ದಾಖಲೆಗಳನ್ನು  ರೇಣುಕಾಚಾರ್ಯ ಅವರಿಗೆ ಡಿ.ಕೆ.ಶಿವಕುಮಾರ್‌ ಅವರೇ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ರೇಣುಕಾಚಾರ್ಯ ಗುರುವಾರ ದಿಲ್ಲಿಗೆ ಹೋದ ಬಳಿಕ  ಡಿ.ಕೆ.ಶಿವಕುಮಾರ್‌ ಸಹ ಶುಕ್ರವಾರ ದಿಲ್ಲಿಗೆ ಹೋಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಅಥವಾ ಯಡಿಯೂರಪ್ಪ ಅವರ ಜತೆ ಕಾಂಗ್ರೆಸ್‌ನ ಯಾವ ನಾಯಕರೂ ಅಡ್ಜಸ್ಟ್‌ ಮೆಂಟ್‌ ಮಾಡಿಕೊಂಡಿಲ್ಲ.  ಯತ್ನಾಳ್‌ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿ ವಿರುದ್ಧದ ನಮ್ಮ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ.  -ಡಿ.ಕೆ.ಶಿವಕುಮಾರ್‌,ಕೆಪಿಸಿಸಿ ಅಧ್ಯ ಕ್ಷ 

 

 

Advertisement

Udayavani is now on Telegram. Click here to join our channel and stay updated with the latest news.

Next