ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಮಾಜಿ ಉಪ ಮುಖ್ಯಮಂತ್ರಿ ತಾರಾ ಚಾಂದ್ ಸೇರಿದಂತೆ ಸುಮಾರು 50ಕ್ಕೂ ಅಧಿಕ ಹಿರಿಯ ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿ, ಗುಲಾಂ ನಬಿ ಆಜಾದ್ ಅವರನ್ನು ಬೆಂಬಲಿಸುವುದಾಗಿ ಮಂಗಳವಾರ (ಆಗಸ್ಟ್ 30) ತಿಳಿಸಿದ್ದಾರೆ.
ಇದನ್ನೂ ಓದಿ:ಸಿಂಧನೂರು ಬಳಿ ಭೀಕರ ಅಪಘಾತ :ಸ್ಥಳದಲ್ಲೇ ಇಬ್ಬರ ಸಾವು :ಅಂತ್ಯಕ್ರಿಯೆಗೆ ಹೋದವರು ಮಸಣ ಸೇರಿದರು
ಮೂಲಗಳ ಪ್ರಕಾರ, ಕಾಂಗ್ರೆಸ್ ಮುಖಂಡರು ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿರುವುದಾಗಿ ತಿಳಿಸಿದೆ. ಮಾಜಿ ಸಚಿವರಾದ ಅಬ್ದುಲ್ ಮಜೀದ್ ವಾನಿ, ಮನೋಹರ್ ಲಾಲ್ ಶರ್ಮಾ, ಘಾರು ರಾಮ್ ಮತ್ತು ಮಾಜಿ ಶಾಸಕ ಬಲ್ವಾನ್ ಸಿಂಗ್ ಸೇರಿದಂತೆ 50ಕ್ಕೂ ಹೆಚ್ಚು ನಾಯಕರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ನಾವೆಲ್ಲ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದು, ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದೇವೆ. ಅಲ್ಲದೇ ಆಜಾದ್ ಅವರನ್ನು ಬೆಂಬಲಿಸುವುದಾಗಿ ಬಲ್ವಾನ್ ಸಿಂಗ್ ತಿಳಿಸಿದರು. ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ನಲ್ಲಿದ್ದ ಜಮ್ಮು=ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು.
ರಾಹುಲ್ ಗಾಂಧಿಯ ಮಧ್ಯಪ್ರವೇಶದಿಂದ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುವಂತಾಗಿದೆ ಎಂದು ಆಜಾದ್ ರಾಜೀನಾಮೆ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷ ತೊರೆದಿರುವ ಆಜಾದ್ ಅವರು ಶೀಘ್ರದಲ್ಲೇ ಜಮ್ಮು-ಕಾಶ್ಮೀರದಲ್ಲಿ ನೂತನ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ.