Advertisement

ಕಾಂಗ್ರೆಸ್‌ ಮಾತ್ರ ಎಲ್ಲರ ಹಿತ ಕಾಪಾಡುತ್ತೆ: ಹಿಟ್ನಾಳ

03:14 PM Apr 09, 2019 | Team Udayavani |
ಗಂಗಾವತಿ: ಕಾಂಗ್ರೆಸ್‌ ಆಡಳಿತವಿರುವಾಗ ಎಲ್ಲ ಸಮುದಾಯಗಳ ಅಭಿವೃದ್ಧಿ ಸಾಧ್ಯ. ಬಿಜೆಪಿ ಶ್ರೀಮಂತರ ಪಕ್ಷ ಇದರಿಂದ ಬಿಜೆಪಿ ಶ್ರೀಮಂತರ ಹಿತ ಕಾಪಾಡುತ್ತದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಹೇಳಿದರು. ಅವರು ತಾಲೂಕಿನ ಶ್ರೀರಾಮನಗರದಲ್ಲಿ ಪ್ರಚಾರದ ವೇಳೆ ಅಲ್ಪಸಂಖ್ಯಾತರು ಮತ್ತು ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದು ಐದು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಹಾಗೂ ಪ್ರಸ್ತುತ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ರೈತರ, ಬಡವರ ಪರವಾಗಿ ಆಡಳಿತ ನೀಡಿವೆ. ಜನಪರ ಆಡಳಿತ ನೀಡಿ ಪ್ರತಿಯೊಬ್ಬರಿಗೂ ಸರಕಾರ ಸೌಲಭ್ಯ ದೊರಕುವಂತೆ ಮಾಡಲಾಗಿದೆ. ಕೇಂದ್ರದಲ್ಲಿ ಐದು ವರ್ಷ ಆಡಳಿತ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪರ ಯೋಜನೆ ಅನುಷ್ಠಾನ ಮಾಡಿಲ್ಲ.
ಸೈನಿಕರು ನಡೆಸಿದ ಸರ್ಜಿಕಲ್‌ ದಾಳಿಯನ್ನು ತಾವೇ ಮಾಡಿದ್ದಾಗಿ ಬಿಂಬಿಸಿಕೊಳ್ಳುವ ಮೂಲಕ ಸೈನಿಕರನ್ನು ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಕಾಂಗ್ರೆಸ್‌ ಪಕ್ಷವನ್ನು ಮತದಾರರು ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಗೋನಾಳ ಅಮರೇಶ, ಕಾಂಗ್ರೆಸ್‌ ಮುಖಂಡರಾದ ರಡ್ಡಿಶ್ರೀನಿವಾಸ, ಮಹಮ್ಮದ್‌ ರಫಿ, ರಮೇಶ ನಾಯಕ ಸೇರಿ ಸ್ಥಳೀಯ ಗ್ರಾಮಸ್ಥರು ಇದ್ದರು.
  ಜನತೆಗೆ ಸುಳ್ಳು ಹೇಳಿದ್ದೇ ಮೋದಿ ಸಾಧನೆ ಜನತೆಗೆ ಸುಳ್ಳು ಹೇಳಿದ್ದೇ ಮೋದಿ ಸಾಧನೆ 
ಕೊಪ್ಪಳ: ಐದು ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಬರಿ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ವಾಗ್ಧಾಳಿ ನಡೆಸಿದರು. ಕೊಪ್ಪಳ ಲೋಕಸಭಾ ಕ್ಷೇತ್ರದ ಶಿರಗುಪ್ಪ ನಗರದಲ್ಲಿ ಮತಯಾಚನೆ ಹಾಗೂ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮೋದಿ ಘೋಷಿಸಿದ ಯೋಜನೆಗಳು ಖರ್ಚಿಲ್ಲದ ಯೋಜನೆಗಳು. ಬೇಟಿ ಬಚಾವ್‌ ಬೇಟಿ ಪಡಾವ್‌ ಅಂತಾರೆ ಬೇಟಿಯು ನಮ್ಮವಳೇ ಬೇಟಿಗೆ ಓದಿಸಿದ ಹಣವೂ ನಮ್ಮದೇ, ಆದರೆ ಇದು ನಮ್ಮ ಕೇಂದ್ರ ಸರ್ಕಾರದ ಯೋಜನೆ ಅನ್ನುತ್ತಾರೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎನ್ನುತ್ತಾರೆ ಕೇವಲ ದೇಶದ ಕಾರ್ಪೊರೇಟರ್‌ಗಳ ವಿಕಾಸವಾಗಿದೆ.
ರೈತರ ಹಿತದೃಷ್ಟಿಯಲ್ಲಿ ಯಾವುದೇ ಒಂದು ಯೋಜನೆಯನ್ನೂ ನೀಡದ ಮೋದಿ ಸರ್ಕಾರವನ್ನು ಕಿತ್ತೂಗೆಯಬೇಕೆಂದರು. ಯುಪಿಎ ಸರ್ಕಾರದಲ್ಲಿ ಅಂದಿನ ಪ್ರಧಾನಿ ಮನಮೋಹನಸಿಂಗ್‌ ಅವರು ದೇಶದ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು.
ದೇಶದ ಯುವಕರಿಗೆ ಉದ್ಯೋಗದ ಆಮಿಷ ನೀಡಿ ಪಕೋಡಾ ಮಾಡಲು ಹೇಳಿದ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ. ಕ್ಷೇತ್ರದಲ್ಲಿ ಸಂಸದ ಸಂಗಣ್ಣ ಕರಡಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್‌ ಬೆಂಬಲಿಸಿ ಎಂದು ಮನವಿ ಮಾಡಿದರು. ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪುರ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ, ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಸವನಗೌಡ ಬಾದರ್ಲಿ, ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ, ಶಿವರಾಮೆಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಬಿ.ಎಂ. ನಾಗರಾಜ, ಹಸನ್‌ಸಾಬ್‌ ದೋಟಿಹಾಳ ಸೇರಿ ಇತರರು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next