Advertisement

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆನ್ಲೈನ್‌ ಪ್ರತಿಭಟನೆ

08:29 AM May 29, 2020 | Suhan S |

ಮುಂಬಯಿ, ಮೇ 28: ಪಕ್ಷದ ಮುಖಂಡ ರಾಹುಲ್‌ ಗಾಂಧಿ ಈ ಹಿಂದೆ ಪ್ರಸ್ತಾಪಿಸಿದ ನ್ಯಾಯ್‌ ಯೋಜನೆಗೆ ಅನುಗುಣವಾಗಿ ಬಡವರಿಗೆ ಕೇಂದ್ರದಿಂದ ಸಹಾಯವನ್ನು ಕೋರಿ ಮಹಾರಾಷ್ಟ್ರ ಕಾಂಗ್ರೆಸ್‌ ಆನ್ಲೈನ್‌ ಪ್ರತಿಭಟನೆ ನಡೆಸಿತು.

Advertisement

ರಾಜ್ಯ ಘಟಕದ ಮುಖ್ಯಸ್ಥ ಬಾಳಸಾಹೇಬ್‌ ಥೋರಟ್‌ ಅವರ ನೇತೃತ್ವದಲ್ಲಿ ನಡೆದ ಸ್ಪೀಕ್‌ ಅಪ್‌ ಇಂಡಿಯಾ ಹೆಸರಿನ ಈ ಆನ್‌ಲೈನ್‌ ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು ಯೂಟ್ಯೂಬ್, ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ಗಳನ್ನು ಬಳಸಿ ಕೇಂದ್ರ ಸರಕಾರದ ವಿರುದ್ಧ ಟೀಕಾ ದಾಳಿ ನಡೆಸಿದರು. ಆರಂಭದಲ್ಲಿ ಬಡ ಕುಟುಂಬಕ್ಕೆ 10,000 ರೂ. ಮತ್ತು ಮುಂದಿನ ಆರು ತಿಂಗಳವರೆಗೆ ತಿಂಗಳಿಗೆ 7,500 ರೂ.ಗಳನ್ನು ನೀಡುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದರು. ಪಕ್ಷದ ಕೇಂದ್ರ ನಾಯಕತ್ವದ ಸೂಚನೆಯ ಮೇರೆಗೆ ಈ ಆಂದೋಲನವನ್ನು ನಡೆಸಲಾಯಿತು ಎಂದು ಥೋರಟ್‌ ಹೇಳಿದ್ದಾರೆ.

ಕೋವಿಡ್ ವೈರಸ್‌ ಪ್ರೇರಿತ ಲಾಕ್‌ ಡೌನ್ನಿಂದಾಗಿ ಉದ್ಭವವಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೆಚ್ಚು ಹಾನಿಗೊಳಗಾದ ಬಡವರಿಗೆ ಹಣವನ್ನು ನೀಡುವುದರಿಂದ ಅವರಿಗೆ ಖರೀದಿ ಮಾಡಲು ಸಾಧ್ಯವಾಗುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಲಿದೆ ಎಂದು ಕಾಂಗ್ರೆಸ್‌ ನಾಯಕ ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಲೋಕಸಭಾ ಚುನಾವಣೆಗೆ ಮೊದಲು ರಾಹುಲ್‌ ಗಾಂಧಿ ನ್ಯಾಯ್‌ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಈ ಯೋಜನೆಯಡಿ ಬಡವರಿಗೆ ತಿಂಗಳಿಗೆ ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸಲಾಗುವುದು ಎಂದು ಅವರು ಪ್ರಸ್ತಾಪಿಸಿದ್ದರು.

ಬಡವರ ಕೊಳ್ಳುವ ಸಾಮರ್ಥ್ಯವು ಕಾರ್ಖಾನೆಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಉದ್ಯೋಗಗಳ ಸೃಷ್ಟಿಗೂ ಕಾರಣವಾಗಲಿದೆ ಎಂದು ಗಾಂಧಿ ಹೇಳಿದ್ದಾರೆ. ಸಾಮಾನ್ಯ ಜನರು ಕೋವಿಡ್ ವೈರಸ್‌ ಬಿಕ್ಕಟ್ಟಿನಿಂದ ಹೆಚ್ಚು ಹಾನಿಗೊಳಗಾಗಿದ್ದಾರೆ. ಯಾವುದೇ ಆದಾಯದ ಮೂಲವಿಲ್ಲದೆ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ ಎಂದು ಮಹಾರಾಷ್ಟ್ರದ ಕಂದಾಯ ಸಚಿವರಾಗಿರುವ ಥೋರಟ್‌ ನುಡಿದಿದ್ದಾರೆ.

ಈ ಸಮಯದಲ್ಲಿ ನಾವು ಹೆಚ್ಚು ನೆನಪಿಸಿಕೊಳ್ಳುತ್ತಿರುವುದು ರಾಹುಲ್‌ ಜಿ ಅವರು ಪ್ರಸ್ತಾಪಿಸಿದ ನ್ಯಾಯ ಯೋಜನೆ. ನಾವು ಆರ್ಥಿಕತೆಗೆ ಆವೇಗವನ್ನು ನೀಡಲು ಬಯಸಿದರೆ ನಾವು ಬಡವರಿಗೆ ಸ್ವಲ್ಪ ಹಣವನ್ನು ನೀಡಬೇಕು. ಹಾಗಾಗಿ, ಕೇಂದ್ರವು ಈ ಪ್ರಸ್ತಾಪಿತ ಯೋಜನೆಗೆ ಅನುಗುಣವಾಗಿ ಬಡವರಿಗೆ ವಿತ್ತೀಯ ನೆರವು ನೀಡಬೇಕು ಎಂದವರು ಫೇಸ್‌ಬುಕ್‌ ಲೈವ್‌ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಾಗ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next