ಬೆಂಗಳೂರು: ರೈತರಿಗೆ 2 ಸಾವಿರ ರೂ. ಬರ ಪರಿಹಾರ ಹಾಗೂ ಬಡ್ಡಿ ಮನ್ನಾ ಘೋಷಣೆಯಾಗಿಯೇ ಉಳಿದಿವೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ.
ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸುಮ್ಮನಾಗಿರುವ ಸರಕಾರವು ಕೇಂದ್ರದಿಂದ 18 ಸಾವಿರ ಕೋಟಿ ರೂ. ನೆರವು ಕೋರಿ ಕೈಕಟ್ಟಿ ಕುಳಿತಿದೆ ಎಂದು ಟೀಕಿಸಿವೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿ ಗಾಲದ ಅಧಿವೇಶನ ಆರಂಭವಾಗುವ ಮುನ್ನ ಬರ ಪರಿಹಾರ ಘೋಷಿಸಿದ್ದ ಸರಕಾರವು ವಿಪಕ್ಷ ಗಳ ವಾಗ್ಧಾಳಿಯಿಂದ ತಪ್ಪಿಸಿಕೊಳ್ಳಲೆಂದೇ ಈ ರಕ್ಷಣಾತ್ಮಕ ತಂತ್ರ ಹೂಡಿತ್ತು ಎಂದು ಆಪಾದಿಸಿವೆ.
ಈ ಕುರಿತು ಸರಕಾರದ ವಿರುದ್ಧ ಹರಿಹಾಯ್ದಿರುವ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರಕಾರದಿಂದ ಮೊದಲ ಕಂತಾಗಿ 223 ಬರಪೀಡಿತ ತಾಲೂಕುಗಳ ರೈತರಿಗೆ ತಲಾ 2 ಸಾವಿರ ರೂ. ಬರ ಪರಿಹಾರ ಕೊಡುವುದಾಗಿ ಘೋಷಿಸಲಾಗಿತ್ತು. ಆದರೆ ಇದುವರೆಗೆ ಯಾವೊಬ್ಬ ರೈತನಿಗೂ ಇದು ಸಿಕ್ಕಿಲ್ಲ ಎಂದು ಜರೆದಿದ್ದಾರೆ. 2 ಸಾವಿರ ರೂ. ಪರಿಹಾರ ಕೊಡುವುದಾಗಿ ಘೋಷಿಸಿದವರು ಈಗ 11 ಸಾವಿರ ಕೋಟಿ ರೂ.ಗಳನ್ನು ಅಲ್ಪಸಂಖ್ಯಾಕರ ಬಡಾವಣೆಗೆ ಖರ್ಚು ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದು ಆರ್. ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.
ಬಡ್ಡಿಮನ್ನಾ ಘೋಷಿಸಿದ್ದರೂ ಈ ಬಗ್ಗೆ ಆದೇಶ ಹೊರಡಿಸದೆ ರೈತರಿಂದ ಸಾಲ ವಸೂಲಾತಿಯಾಗಲು ಬಿಟ್ಟಿದೆ ಎಂದು ಬಿಜೆಪಿ, ಜೆಡಿಎಸ್ ದೂರಿವೆ.