ಶಿವಮೊಗ್ಗ: ರಾಜ್ಯದಲ್ಲಿ ಬದಲಾವಣೆಯ ಅವಶ್ಯಕತೆಯಿದೆ. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಬದಲಾವಣೆಯ ವಾತವರಣ ಕಂಡುಬರುತ್ತಿದೆ. ಜನರಿಗೆ ಸುಳ್ಳು ಹೇಳಿ, ಬಿಜೆಪಿಯವರು ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅದರ ಪರಿಣಾಮವಾಗಿ ಹಾನಗಲ್ ಉಪ ಚುನಾವಣೆ ಫಲಿತಾಂಶ ಬಂದಿದೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಕಡೆ ಓಡಾಟ ಮಾಡುತ್ತಿದ್ದೇನೆ. ಆರ್.ಪ್ರಸನ್ನ ಕುಮಾರ್ ಮತ್ತು ಭೀಮಣ್ಣ ನಾಯ್ಕ್ ಪರವಾಗಿ ಉತ್ತಮ ವಾತವರಣವಿದೆ. ಕಳೆದ ಆರು ವರ್ಷ ಅವಧಿಯಲ್ಲಿ ಪ್ರಸನ್ನ ಕುಮಾರ್ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.
ಗ್ರಾಮ ಪಂಚಾಯತ್ ಸದಸ್ಯರು ನಾವು ಯಾಕದರೂ ಸದಸ್ಯರಾಗಿದ್ದೇವೆ ಎಂದು ಬೇಸತ್ತು ಹೋಗಿದ್ದಾರೆ. ಅನುದಾನ ಇಲ್ಲ, ಯಾವುದೇ ಕೆಲಸ ಇಲ್ಲ. ಜನರಿಂದ ಬಳಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಟ್ಟ ಮನೆಗಳಿಗೆ ಇಂದು ಸರ್ಕಾರ ಹಣವನ್ನೇ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ:ಬಿಸಿಯೂಟದಲ್ಲಿ ಮೊಟ್ಟೆ ಬೇಡ : ಸಿಎಂಗೆ ನೂರಾರು ಮಠಾಧೀಶರ ಆಗ್ರಹ
ಫಲಾನುಭವಿಗಳು ಇವತ್ತು ಗ್ರಾಮ ಪಂಚಾಯತ್ ಸದಸ್ಯರನ್ನು ಕೇಳುತ್ತಿದ್ದಾರೆ. 15ನೇ ಹಣಕಾಸು ಯೋಜನೆಯಡಿ ಸರ್ಕಾರ ಕ್ರೀಯಾಯೋಜನೆ ರೂಪಿಸುವ ಕೆಲಸ ಮಾಡುತ್ತಿದೆ. ಹಾಗಾದರೆ ಗ್ರಾಮ ಪಂಚಾಯತ್ ಸದಸ್ಯರು ಗೆದ್ದು ಬಂದಿರುವುದು ಯಾವ ಕಾರಣಕ್ಕೆ.? ಬಿಜೆಪಿ ಬೆಂಬಲಿತ ಸದಸ್ಯರುಗಳೇ ಇಂದು ಬೇಸತ್ತು ಕಾಂಗ್ರೆಸ್ ಪರವಾಗಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿನ ಜೆಡಿಎಸ್ ಬೆಂಬಲಿತ ಸದಸ್ಯರುಗಳು ನಮ್ಮ ಪರವಾಗಿಯೇ ಇದ್ದಾರೆ. ಆರ್.ಪ್ರಸನ್ನಕುಮಾರ್ ಉತ್ತಮ ಅಂತರದಲ್ಲೇ ಈ ಬಾರಿ ಗೆಲ್ಲಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳ ಪರವಾಗಿ ಪರಿಷತ್ ನಲ್ಲಿ ಪ್ರಸನ್ನ ಕುಮಾರ್ ಧ್ವನಿಯಾಗಲಿದ್ದಾರೆ ಎಂದ ಮಧು ಬಂಗಾರಪ್ಪ ಹೇಳಿದರು