ನವದೆಹಲಿ: ಜಿತಿನ್ ಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ನೂರು ವರ್ಷಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮೇಜರ್ ಸರ್ಜರಿ ಆಗಬೇಕಾದ ಅಗತ್ಯವಿದೆ, ಅಲ್ಲದೇ ಕೇವಲ ಪರಂಪರೆಯನ್ನು ಅವಲಂಬಿಸಬೇಕಾಗಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪೆಟ್ರೋಲ್ 100 ನಾಟೌಟ್: ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಪಕ್ಷದ ವರಿಷ್ಠರು ಜವಾಬ್ದಾರಿಯನ್ನು ವಹಿಸುವಾಗ ಸೈದ್ಧಾಂತಿಕ ಬದ್ಧತೆಗೆ ಆದ್ಯತೆ ನೀಡಬೇಕು ಎಂದು ಮೊಯ್ಲಿ ಸಲಹೆ ನೀಡಿದ್ದಾರೆ. ಜಿತಿನ್ ಪ್ರಸಾದ್ ಅವರ ಕುರಿತು ಮಾತನಾಡಿದ ಮೊಯ್ಲಿ, ಜಿತಿನ್ ಪ್ರಸಾದ್ ವೈಯಕ್ತಿಕ ಹಿತಾಸಕ್ತಿಯಿಂದ ಪಕ್ಷಾಂತರ ಮಾಡಿದ್ದಾರೆ ಎಂದು ಆರೋಪಿಸಿದರು. ಉತ್ತರಪ್ರದೇಶದ ಈ ನಾಯಕನ ಸೈದ್ಧಾಂತಿಕ ಬದ್ಧತೆಯ ಬಗ್ಗೆ ಮೊದಲಿನಿಂದಲೂ ಸಂಶಯ ಇತ್ತು. ಅಲ್ಲದೇ ಇವರ ಉಸ್ತುವಾರಿಯಲ್ಲಿ ಪಶ್ಚಿಮಬಂಗಾಳದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಮಾಡಿದೆ ಎಂದು ಜಿತಿನ್ ವಿರುದ್ಧ ವಾಗ್ದಾಳಿ ನಡೆಸಿದರು.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವೀರಪ್ಪ ಮೊಯ್ಲಿ, ಪಕ್ಷದ ವರಿಷ್ಠರು ಮುಖ್ಯವಾಗಿ ನಾಯಕರ ಬಗ್ಗೆ ಮೌಲ್ಯಮಾಪನ ಮಾಡಬೇಕು, ಅಲ್ಲದೇ ಅರ್ಹತೆ ಇಲ್ಲದ ವ್ಯಕ್ತಿಯನ್ನು ನಾಯಕನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮರು ಚಿಂತನೆ ನಡೆಸಬೇಕಾಗಿದೆ. ಅಷ್ಟೇ ಅಲ್ಲ ಹೊಸ ಕಾರ್ಯತಂತ್ರವನ್ನು ರೂಪಿಸುವ ಮೂಲಕ ಮಾತ್ರ ಕಾಂಗ್ರೆಸ್ ಪಕ್ಷ ಏಳಿಗೆ ಕಾಣಲು ಸಾಧ್ಯ ಎಂದು ಹೇಳಿದರು.
ಪಕ್ಷದೊಳಗಿನ ಸೂಕ್ತ ಜನರನ್ನು ಗುರುತಿಸಿ ಹುದ್ದೆಯನ್ನು ನೀಡಬೇಕು.ಯಾರಿಗೆ ಸಾಮರ್ಥ್ಯ ಇಲ್ಲವೋ ಅಂತಹ ಅಸಮರ್ಥರನ್ನು ಜವಾಬ್ದಾರಿಯುತ ಸ್ಥಾನದಲ್ಲಿ ಕೂರಿಸಬಾರದು. ಇದೊಂದು ಪಕ್ಷಕ್ಕೆ ಪಾಠವಾಗಿದೆ. ಪಕ್ಷದ ಬೆಳವಣಿಗೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮೊಯ್ಲಿ ಪಕ್ಷದ ಹೈಕಮಾಂಡ್ ಗೆ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.