ಮುಂಬಯಿ: ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ವಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ದಲ್ಲಿರುವ ಕಾಂಗ್ರೆಸ್-ಎನ್‌ಸಿಪಿ ಒಕ್ಕೂಟವು ಪ್ರಸ್ತುತ ಬಂಡಾಯದ ಭೀತಿಯನ್ನು ಎದುರಿಸುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಎನ್‌ಸಿಪಿಯ ಸುಮಾರು 12 ನಾಯಕರು ಬಿಜೆಪಿಯ ಸಂಪರ್ಕದಲ್ಲಿದ್ದು, ಕೇಸರಿ ಪಾಳಯವನ್ನು ಸೇರಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಕನಿಷ್ಠ 8 ಮಂದಿ ಕಾಂಗ್ರೆಸ್ ನಾಯಕರಾಗಿದ್ದು, ಉಳಿದವರು ಎನ್‌ಸಿಪಿಯವರಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಪ್ರಚಂಡ ಗೆಲುವಿನ ಕಾರಣದಿಂದಾಗಿ ಈ ಎರಡು ಪಕ್ಷಗಳ ಶಾಸಕರು ಮತ್ತು ನಾಯಕರು ಕೇಸರಿ ಪಕ್ಷವನ್ನು ಸೇರುವ ಯೋಚನೆಯಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಮುಂಬಯಿ ಕಾಂಗ್ರೆಸ್‌ನ ಓರ್ವ ವರಿಷ್ಠ ದಲಿತ ನಾಯಕ, ಸ್ವತಃ ಉತ್ತರ ಭಾರತೀಯ ಸಮುದಾಯದ ಪ್ರತಿನಿಧಿ ಎಂದು ಹೇಳಿಕೊಳ್ಳುವ ಓರ್ವ ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಹಾಗೂ ಪುಣೆ ಮೂಲದ ಮಾಜಿ ಕಾಂಗ್ರೆಸ್ ಸಚಿವರೊಬ್ಬರು ಬಿಜೆಪಿಯಲ್ಲಿ ಸೇರಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಮ್ಮ ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇರೆಗೆ ತಿಳಿಸಿದ್ದಾರೆ.
ಮುಂಬಯಿಯಿಂದ ಕಾಂಗ್ರೆಸ್‌ನ ದಲಿತ ನಾಯಕರೊಬ್ಬರು ನಮ್ಮ ಪಕ್ಷವನ್ನು ಸೇರಲು ಅಂತಿಮ ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ. ಅಲ್ಲದೆ, ಪುಣೆ ಜಿಲ್ಲೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ಸ್ಥಾನದ ಮೇಲೆ ಕಾಂಗ್ರೆಸ್‌ನ ಮಿತ್ರಪಕ್ಷವು ಹಕ್ಕು ಪ್ರತಿಪಾದನೆ ಮಾಡಿದ್ದು, ಈ ಕಾರಣಕ್ಕಾಗಿ ಅವರು ನಮ್ಮ ಟಿಕೆಟ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ ಎಂದು ಬಿಜೆಪಿಯ ಇನ್ನೋರ್ವ ನಾಯಕ ಹೇಳಿದ್ದಾರೆ.
ಜೂನ್‌ನಲ್ಲಿ ಸೇರ್ಪಡೆ
ಕಾಂಗ್ರೆಸ್ ಮತ್ತು ಎನ್‌ಸಿಪಿಯ ಕೆಲವು ನಾಯಕರು ಜೂನ್ ತಿಂಗಳ ಮೊದಲ 2 ವಾರಗಳಲ್ಲಿ ಬಿಜೆಪಿಯಲ್ಲಿ ಸೇರಲಿದ್ದಾರೆ. ಅದೇ, ಉಳಿದ ನಾಯಕರು ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನದ ಬಳಿಕ ಬಿಜೆಪಿಯಲ್ಲಿ ಸೇರುವ ಸಾಧ್ಯತೆಯಿದೆ.