Advertisement

27ರಂದು ಕಾಂಗ್ರೆಸ್‌ ನವಸಂಕಲ್ಪ ಚಿಂತನಾ ಶಿಬಿರ

04:31 PM Jul 22, 2022 | Team Udayavani |

ದಾವಣಗೆರೆ: ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನವಸಂಕಲ್ಪ ಚಿಂತನಾ ಶಿಬಿರ ಜು. 27 ರಂದು ದಾವಣಗೆರೆಯ ಬಾಪೂಜಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಚಿಂತನಾ ಶಿಬಿರ ಜಿಲ್ಲಾ ಉಸ್ತುವಾರಿ ಎಂ.ಸಿ. ವೇಣುಗೋಪಾಲ್‌ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11ಕ್ಕೆ ನಡೆಯುವ ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಶಾಸಕ ಡಾ| ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ, ನಿಖೀತ್‌ರಾಜ್‌ ಮೌರ್ಯ ಸೇರಿದಂತೆ ಎಲ್ಲ ಮುಖಂಡರು, ಪದಾಧಿಕಾರಿಗಳು ಭಾಗವಹಿಸುವರು ಎಂದರು.

2023ರ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ, ಅಭ್ಯರ್ಥಿ ಯಾರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದ ಜೊತೆಗೆ ಪ್ರತಿಯೊಬ್ಬ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ನವ ಸಂಕಲ್ಪ ಚಿಂತನಾ ಶಿಬಿರ ನಡೆಸಲಾಗುತ್ತಿದೆ. ಜಗಳೂರು, ಚನ್ನಗಿರಿ, ಜಗಳೂರು, ಮಾಯಕೊಂಡದಲ್ಲಿ ಈಗಾಗಲೇ ಶಿಬಿರ ನಡೆದಿವೆ ಎಂದು ಹೇಳಿದರು.

ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಅನೇಕ ಕಾರ್ಯಕರ್ತರು, ಜನರು ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಅವಕಾಶ ಇವೆ. ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಅವಕಾಶ ಇದೆ. ಹಾಗಾಗಿ ಎಲ್ಲ ನಾಯಕರು ಒಂದಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡುವ ಕ್ರಮಗಳ ಬಗ್ಗೆ ಸಲಹೆ-ಸೂಚನೆ ನೀಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರ ಒಟ್ಟಾಭಿಪ್ರಾಯಕ್ಕೆ ಮನ್ನಣೆ ನೀಡಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕು. ಯಾವುದೇ ಕಾರಣಕ್ಕೂ ಮುಖಂಡರ ಇನ್ನಿತರರ ಒತ್ತಾಯಕ್ಕೆ ಮಣಿಯಬಾರದು. ಆರು ತಿಂಗಳ ಮುನ್ನವೇ ಅಭ್ಯರ್ಥಿಗಳ ಘೋಷಣೆ ಮಾಡಿದಲ್ಲಿ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಬಹುದು. ಕಾರ್ಯಕರ್ತರ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಅವಕಾಶ ನೀಡಿದರೆ ಗೆಲ್ಲಿಸಿಕೊಂಡು ಬರುವುದಾಗಿಯೂ ತಿಳಿಸಿದ್ದಾರೆ ಎಂದರು.

Advertisement

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಎಲ್ಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆ. 1 ರಿಂದ 10ರವರೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 75 ಕಿಲೋ ಮೀಟರ್‌ ಪಾದಯಾತ್ರೆ ನಡೆಸಲಾಗುವುದು. ಪಾದಯಾತ್ರೆಯಲ್ಲಿ ತ್ರಿವರ್ಣ ಧ್ವಜದೊಂದಿಗೆ ತಿರಂಗ ಹಾರಿಸುವ ಜೊತೆಗೆ ದೇಶದ ಸ್ವಾತಂತ್ರ್ಯ ಸಂಗ್ರಾಮ, ಹೋರಾಟಗಾರರು, ಪ್ರಾಣಾರ್ಪಣೆ ಇತರೆ ವಿಚಾರಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ನಿಖೀತ್‌ರಾಜ್‌ ಮೌರ್ಯ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್‌. ಮಂಜುನಾಥ್‌, ಎ. ನಾಗರಾಜ್‌, ಕೆ.ಜಿ. ಶಿವಕುಮಾರ್‌, ಅಯೂಬ್‌ ಪೈಲ್ವಾನ್‌, ಎಸ್‌. ಮಲ್ಲಿಕಾರ್ಜುನ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಕಾರ್ಯಕರ್ತರಿಂದ ವ್ಯಕ್ತವಾಗಿರುವ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಒಳಗೊಂಡಂತೆ ಕೇಂದ್ರ, ರಾಜ್ಯದ ಎಲ್ಲ ಮುಖಂಡರ ಗಮನಕ್ಕೆ ತರಲಾಗುವುದು. ಕಾರ್ಯಕರ್ತರ ಅಭಿಪ್ರಾಯ ಕಾರ್ಯರೂಪಕ್ಕೆ ತರುವ ಕೆಲಸ ಮಾಡಲಾಗುವುದು. –ಎಂ.ಸಿ. ವೇಣುಗೋಪಾಲ್‌, ಕೆಪಿಸಿಸಿ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next