ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಪಾದಯಾತ್ರೆಗಳಿಗೆ ವ್ಯಕ್ತವಾದ ಜನಬೆಂಬಲವು ಸರ್ಕಾರದ ವಿರುದ್ಧ ವ್ಯಕ್ತವಾದ ಆಕ್ರೋಶ ಎಂದು ವಿಶ್ಲೇಷಿಸಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಈ ಮೂಲಕ ಕರ್ನಾಟಕದಿಂದ ದೇಶಕ್ಕೆ ದೊಡ್ಡ ಸಂದೇಶ ರವಾನೆಯಾಗುತ್ತಿದೆ ಎಂದು ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಾದಯಾತ್ರೆಗಳಿಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಮೇಕೆದಾಟು ಪಾದಯಾತ್ರೆ ಅತ್ಯಂತ ಯಶಸ್ವಿಯಾಯಿತು. ಜನರ ಉತ್ಸಾಹ ಕಂಡು ನಾವೆಲ್ಲರೂ ಉತ್ತೇಜಿತರಾಗಿದ್ದೇವೆ. ಸ್ವಾತಂತ್ರ್ಯ ದಿನದಂದು ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ನಡಿಗೆ ಯಾತ್ರೆ ಯಲ್ಲಿ ಕಿ.ಮೀ.ಗಟ್ಟಲೆ ಜನ ಸಾಗರೋಪಾದಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದ್ದಾರೆ. ಇದರೊಂದಿಗೆ ದೇಶಕ್ಕೆ ದೊಡ್ಡ ಸಂದೇಶ ರವಾನೆಯಾಗಿದೆ ಎಂದು ಹೇಳಿದರು.
ಈ ಯಾತ್ರೆಗಳು ಸರ್ಕಾರದ ವಿರುದ್ಧ ಜನ ತಮ್ಮ ಆಕ್ರೋಶ ವ್ಯಕ್ತಪಡಿಸಲು ಉತ್ತಮ ವೇದಿಕೆ ಕಲ್ಪಿಸಿದ್ದು, ರಾಜ್ಯದಿಂದ ಉತ್ತಮ ಸಂದೇಶ ರವಾನೆಯಾಗಿದೆ. ದೇಶದಲ್ಲಿ ಪ್ರಧಾನಿ ಬೆಂಬಲಿತ ಕೆಲವೇ ವ್ಯಕ್ತಿಗಳ ಕಲ್ಯಾಣಕ್ಕಿಂತ ಇಡೀ ದೇಶದ ಜನರ ಕಲ್ಯಾಣ ಮುಖ್ಯವಾಗಬೇಕು. ಹೀಗಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದೂ ಸ್ಪಷ್ಟಪಡಿಸಿದರು.
ಸಂಸದ ಡಾಲಿ ಶರ್ಮಾ ಮಾತನಾಡಿ, ಕಾಂಗ್ರೆಸ್‌ನ “ಭಾರತ ಜೋಡೋ ಯಾತ್ರೆ’ಗೆ ಕ್ಷಣಗಣನೆ ಆರಂಭಗೊಂಡಿದ್ದು, ಸೆ. 7ರಂದು ತಮಿಳುನಾಡಿನಲ್ಲಿ ಈ ಯಾತ್ರೆಗೆ ಚಾಲನೆ ದೊರೆಯಲಿದೆ. ತಮಿಳುನಾಡಿನ ಪೆರಂಬದೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಗ್ಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ನಮನ ಸಲ್ಲಿಸಲಿದ್ದಾರೆ. ನಂತರ ಮಧ್ಯಾಹ್ನ 3ರ ಸುಮಾರಿಗೆ ತ್ರಿವೆಲ್ಲೂರಿನಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಕಾಮರಾಜ್ ಅವರ ಸ್ಮಾರಕಕ್ಕೆ ನಮನ ಸಲ್ಲಿಸುವರು. ಗಾಂಧಿ ಮಂಟಪದಲ್ಲಿ ತ್ರಿವರ್ಣ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಅಲ್ಲಿಂದ ಬೀಚ್ ರಸ್ತೆವರೆಗೆ ಮೆರವಣಿಗೆಯಲ್ಲಿ ಸಾಗಿಬಂದು ಸಂಜೆ 6.30ಕ್ಕೆ ಸಾರ್ವಜನಿಕ ಸಭೆ ನಡೆಸಲಾಗುವುದು. ಇದರೊಂದಿಗೆ ಭಾರತ ಜೋಡೋ ಯಾತ್ರೆಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಸೆ. 8ರಂದು ಬೆಳಿಗ್ಗೆ 7 ಗಂಟೆಗೆ ಕನ್ಯಾಕುಮಾರಿಯ ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟೆಕ್ನಿಕ್ ಮೈದಾನದಿಂದ ಪಾದಯಾತ್ರೆ ಆರಂಭವಾಗಲಿದೆ. ಈ ಸಮಯದಲ್ಲಿ ತಮಿಳುನಾಡು ಕಾಂಗ್ರೆಸ್ ನಾಯಕರು ಹಾಗೂ ಇತರೆ ರಾಜ್ಯಗಳ ಕೆಲ ನಾಯಕರು ಭಾಗವಹಿಸಲಿದ್ದಾರೆ ಎಂದರು.