Advertisement

CLP ಸಭೆ:ನಾಲ್ವರು ಗೈರು;ಭೀತಿಯಲ್ಲಿ ಕೈ ಶಾಸಕರೆಲ್ಲ ರೆಸಾರ್ಟ್‌ಗೆ!

01:15 PM Jan 18, 2019 | |

ಬೆಂಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ಆಪರೇಷನ್‌ ಕಮಲ ಭೀತಿ ಇನ್ನೂ ದೂರವಾಗದೆ ಇರುವುದಕ್ಕೆ ಇಂದು ಶುಕ್ರವಾರ ನಡೆದ  ಶಾಸಕಾಂಗ ಪಕ್ಷ ದ ಸಭೆ ಸಾಕ್ಷಿಯಾಗಿದೆ. ಸಭೆ ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾದದ್ದು  ಒಂದೆಡೆಯಾದರೆ ಇನ್ನೊಂದೆಡೆ ನಾಲ್ವರು ಅಸಮಾಧಾನಿತ ಶಾಸಕರು ಗೈರಾಗಿದ್ದಾರೆ. ಇನ್ನೂ ಆಪರೇಷನ್‌ ಕಮಲ ನಡೆಯುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ತೆರಳುತ್ತಿರುವುದಾಗಿ ಶಾಸಕಾಂಗ ಪಕ್ಷದ ನಾಯಕ , ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

Advertisement

ತಡವಾಗಿ ಆರಂಭವಾದ ಸಿಎಲ್‌ಪಿ ಸಭೆ; ನಾಲ್ವರು ಗೈರು 
3.30 ಕ್ಕೆ ನಿಗದಿಯಾದ ಶಾಸಕಾಂಗ ಪಕ್ಷದ ಸಭೆ ತಡವಾಗಿ ಅಂದರೆ 5.30 ಕ್ಕೆ ಆರಂಭವಾಯಿತು. ಸಭೆಗೆ ನಾಲ್ವರು ಬಂಡಾಯ ಶಾಸಕರು ಗೈರಾಗಿದ್ದಾರೆ. ಚಿಂಚೋಳಿ ಶಾಸಕ ಡಾ.ಉಮೇಶ್‌ ಯಾದವ್‌, ಅಥಣಿಯ ಮಹೇಶ್‌ ಕಮಟಳ್ಳಿ  , ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಗೋಕಾಕ್‌ನ ರಮೇಶ್‌ ಜಾರಕಿಹೊಳಿ ಅವರು ಗೈರಾದರು. 

ಬಿ.ಸಿ.ಪಾಟೀಲ್‌ ಹಾಜರು, ತುರ್ತು ನಿರ್ಗಮನ
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ  ಹಿರೇಕೆರೂರು ಶಾಸಕ  ಬಿ.ಸಿ.ಪಾಟೀಲ್‌ ಅವರು ಸಭೆಗೆ ಆಗಮಿಸಿ ತುರ್ತಾಗಿ ನಿರ್ಗಮಿಸಿದರು. ಮಗಳ ಮದುವೆ ಇದೆ ಸಿದ್ದರಾಮಯ್ಯ ಅವರಿಗೆ ತಿಳಿಸಿ ಸಭೆಯಿಂದ ತೆರಳುತ್ತಿದ್ದೇನೆ.ನನಗೆ ಬಿಜೆಪಿಯ ಯಾರೂ ಸಂಪರ್ಕ ಮಾಡಿಲ್ಲ  ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ 
ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಿದ್ದರಾಮಯ್ಯ ,ನಮ್ಮ ಶಾಸಕರೆಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಬಿಜೆಪಿ ನಮ್ಮ ಶಾಸಕರಿಗೆ ಕೋಟ್ಯಂತರ ರೂಪಾಯಿ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿದರೂ ಯಾರೂ ಹೋಗದೆ ನಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ. 

ನಾಗೇಂದ್ರ ಮತ್ತು ಉಮೇಶ್‌ ಜಾಧವ್‌ ಅವರು ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕಾರಣಗಳನ್ನು  ತಿಳಿಸಿದ್ದಾರೆ. ರಮೇಶ್‌ ಜಾರಕಿಹೊಳಿ ಮತ್ತು ಮಹೇಶ್‌ ಕುಮಟಳ್ಳಿ ಅವರು ಯಾವುದೇ ಕಾರಣ ನೀಡಿಲ್ಲ. ನಾವು ಅವರಿಗೆ ಕಾರಣ ಕೇಳಿ ನೊಟೀಸ್‌ ನೀಡುತ್ತೇವೆ. ಉತ್ತರ ಬಂದ ಬಳಿಕ ಹೈಕಮಾಂಡ್‌ ಅವರನ್ನು ಕೇಳಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು. 

Advertisement

ರೆಸಾರ್ಟ್‌ ರಾಜಕಾರಣ 

ಬಿಜೆಪಿಯವರು ನಮ್ಮ ಶಾಸಕರಿಗೆ ಆಸೆ ಆಮಿಷಗಳನ್ನು ನೀಡಿದ್ದಾರೆ.  ನೂರು ಕೋಟಿ, 50 ಕೋಟಿ , ಸಚಿವ ಸ್ಥಾನದ ಆಸೆ ತೋರಿದ್ದಾರೆ, ಇನ್ನೂ ಪ್ರಯತ್ನ ಮುಂದುವರಿಸಿದ್ದಾರೆ. ಹಾಗಾಗಿ ನಾವೆಲ್ಲಾ ಒಟ್ಟಿಗೆ ಇರುತ್ತೇವೆ.ಎಷ್ಟು ದಿನ ಅಗತ್ಯ ಇರಬೇಕು ಅಷ್ಟು ದಿನ ಒಂದು ಕಡೆ ಇರುತ್ತೇವೆ ಎಂದು ರೆಸಾರ್ಟ್‌ಗೆ ತೆರಳುತ್ತಿರುವುದನ್ನು ಖಚಿತ ಪಡಿಸಿದರು. 

ದುಡ್ಡು ಕೊಡ್‌ತೀವಿ, ಮಂತ್ರಿ ಮಾಡ್‌ತೀವಿ ಎನ್ನುತ್ತಾರೆ. ಚೌಕಿದಾರನಿಗೆ ಇಷ್ಟೊಂದು ಕೋಟಿ ದುಡ್ಡು ಎಲ್ಲಿಂದ ಬರ್ತದಪ್ಪಾ  ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರಿದರು. 

 ಈ ಲಫ‌ಂಗ ರಾಜಕಾರಣ ಶುರುವಾದದ್ದೇ ಬಿಜೆಪಿಯಿಂದ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಬಳಿಕ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next