Advertisement

ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಅನುದಾನ: ಶಿವಶಂಕರ್‌

02:21 PM Aug 22, 2017 | Team Udayavani |

ದಾವಣಗೆರೆ: ಸಹಕಾರ ಸಂಘಗಳಲ್ಲಿನ ರೈತರ 50 ಸಾವಿರ ಸಾಲ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಚುನಾವಣಾ ಗಿಮಿಕ್‌ ಹೊರತು ಮತ್ತೇನು ಅಲ್ಲ ಎಂದು ಹರಿಹರ ಶಾಸಕ ಎಚ್‌.ಎಸ್‌. ಶಿವಶಂಕರ್‌ ಹೇಳಿದ್ದಾರೆ.

Advertisement

ಸೆ. 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬೃಹತ್‌ ಸಮಾವೇಶದ ಹಿನ್ನೆಲೆಯಲ್ಲಿ ಸೋಮವಾರ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಆವರು, 50 ಸಾವಿರ ಮನ್ನಾಕ್ಕಾಗಿ ರಾಜ್ಯ ಸರ್ಕಾರ 8 ಸಾವಿರ ಕೋಟಿ ಹೊಂದಾಣಿಕೆಗೆ ಕಸರತ್ತು ನಡೆಸುತ್ತಿದೆ. ಅದು ರಾಜ್ಯದ ಅಭಿವೃದ್ಧಿ ಕಾರ್ಯಕ್ಕೆ ತೀವ್ರ ಹೊಡೆತ ಕೊಡುತ್ತಿದೆ ಎಂದರು. ಸಹಕಾರ ಸಂಘಗಳಲ್ಲಿನ ಸಾಲ ಮನ್ನಾ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ 60 ಸಾವಿರ ಕೋಟಿ
ಸಾಲ ತಂದು ಆಡಳಿತ ನಡೆಸುತ್ತಿರುವುದು ರಾಜ್ಯದ ದುರ್ದೈವ. ಈಗ ಬರೀ ಸ್ವಜಾತಿ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.  ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಕ್ಕೆ ಹೆಚ್ಚಿನ, ವಿಪಕ್ಷ ಶಾಸಕರಿಗೆ ಕಡಿಮೆ ಅನುದಾನ ನೀಡುವಂತಹ ತಾರತಮ್ಯ ಮಾಡುತ್ತಿದೆ ಎಂದು 
ಆರೋಪಿಸಿದರು.

ಕೇಂದ್ರ, ರಾಜ್ಯ ಸರ್ಕಾರ ದಲಿತರ ಶೋಷಣೆ ಮಾಡುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಆ ಪಕ್ಷಗಳ ಬಗ್ಗೆ ದೂರುವುದಕ್ಕಿಂತಲೂ ಕುಮಾರಸ್ವಾಮಿಯವರು 20 ತಿಂಗಳ ಅವಧಿ ನೀಡಿರುವ ಜನಪಯೋಗಿ ಕಾರ್ಯಕ್ರಮ, ಸೌಲಭ್ಯಗಳ ಬಗ್ಗೆ ಜನರಿಗೆ ಮಾಡಿಕೊಡುವ ಮೂಲಕ 2018ರ ಚುನಾವಣೆಯಲ್ಲಿ ಜೆಡಿಎಸ್‌ ಗೆಲುವು, ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವತ್ತ ಎಲ್ಲರೂ ಶ್ರಮಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮಾವೇಶ ಎಲ್ಲಿಯೇ ನಡೆಯಲಿ ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ
ತಿಳಿಸಿದರು. 

ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಭಾರತಕ್ಕೆ ಸಂವಿಧಾನ ನೀಡಿರುವಂತಹ ವಿಶ್ವಜ್ಞಾನಿ ಅಂಬೇಡ್ಕರ್‌ ರವರಿಗೆ ಕಾಂಗ್ರೆಸ್‌ ಮಾಡಿರುವಷ್ಟು ಅಪಮಾನ ಇನ್ನಾವುದೇ ಪಕ್ಷ ಮಾಡಿಲ್ಲ. 1952ರ ಮಹಾ ಚುನಾವಣೆಯಲ್ಲಿ ಅಂಬೇಡ್ಕರ್‌ರ ವಿರುದ್ಧ ಅವರ ಆಪ್ತ ಸಹಾಯಕನನ್ನೇ ಕಣಕ್ಕಿಳಿಸಿ, ಅವರನ್ನು ಸೋಲಿಸಿತು. ಕಾಂಗ್ರೆಸ್‌ ಆಡಳಿತವಿರುವರೆಗೂ ಅಂಬೇಡ್ಕರ್‌ರವರಿಗೆ ಭಾರತರತ್ನ ನೀಡಲಿಲ್ಲ. ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಅವರ ಫೋಟೋ ಹಾಕಲಿಲ್ಲ. ದಲಿತರ ಶೋಷಣೆ, ಅಪಮಾನ ಮಾಡುವುದರಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಒಂದೇ. ದಲಿತರ ಬಗ್ಗೆ ಸದಾ ಸುಳ್ಳು ಹೇಳುವ ಬಿಜೆಪಿ, ಮೋಸ ಮಾಡುವ ಕಾಂಗ್ರೆಸ್‌ ಬದಲಿಗೆ ಸಾಮಾಜಿಕ ನ್ಯಾಯ ಒದಗಿಸುವ ಜೆಡಿಎಸ್‌ಗೆ ದಲಿತರು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ರಾಜ್ಯ ಸರ್ಕಾರ ಬರೀ ಬಡಾಯಿ ಕೊಚ್ಚಿಕೊಳ್ಳುತ್ತದೆ. ದಲಿತರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ವಿಶೇಷ ಕಾನೂನು ಅನ್ವಯ ಬಿಡುಗಡೆಯಾಗಿರುವ 87 ಕೋಟಿಯಲ್ಲಿ ಈವರೆಗೆ ಖರ್ಚು ಮಾಡಿರುವುದು ಕೇವಲ 22 ಸಾವಿರ ಕೋಟಿ. ದಲಿತರ ಅಭಿವೃದ್ಧಿಗೆ ಯಾವುದೇ
ರಚನಾತ್ಮಕ ಕೆಲಸ, ಯೋಜನೆ ಜಾರಿಗೆ ತಂದಿಲ್ಲ. ಬರೀ ಅಂಕಿ-ಅಂಶ ತೋರಿಸುತ್ತಾ ದಲಿತರ ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದರು. 

ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಅಧ್ಯಕ್ಷ ಡಾ| ಕೆ. ಅನ್ನದಾನಿ, ಕಾಂಗ್ರೆಸ್‌, ಬಿಜೆಪಿಯಿಂದ ಬೇಸತ್ತಿರುವ ಪರಿಶಿಷ್ಟ ಜಾತಿ, ಪಂಗಡದವರು ನಮ್ಮ ನಡಿಗೆ ಜೆಡಿಎಸ್‌ ಕಡೆಗೆ ಎನ್ನುತ್ತಿದ್ದಾರೆ. ಸೆ. 21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬೃಹತ್‌ ಸಮಾವೇಶದಲ್ಲಿ 5 ರಿಂದ 6 ಲಕ್ಷ ಜನರು ಭಾಗವಹಿಸುವರು. ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬಂದು, ಕುಮಾರಸ್ವಾಮಿ 
ಮುಖ್ಯಮಂತ್ರಿಯಾಗುವುದು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Advertisement

ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಅಧ್ಯಕ್ಷ ಸಿ. ಅಂಜಿನಪ್ಪ ಕಡತಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ಶೀಲಾ ರಾಮಚಂದ್ರನಾಯ್ಕ, ಪರಿಶಿಷ್ಟ ಪಂಗಡ ವಿಭಾಗ ರಾಜ್ಯ ಅಧ್ಯಕ್ಷ ಹೊದಿಗೆರೆ ರಮೇಶ್‌, ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ಜಿಲ್ಲಾ ಪಂಚಾಯತ್‌ ಸದಸ್ಯರಾದ ಹೇಮಾವತಿ, ಫಕೀರಪ್ಪ, ಯುವ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌, ಟಿ. ದಾಸಕರಿಯಪ್ಪ, ಹೂವಿನಮಡು ಚಂದ್ರಪ್ಪ, ಕೆ. ಮಂಜುಳಾ ಇತರರು ಇದ್ದರು. ಗೋಣಿವಾಡ ಮಂಜುನಾಥ್‌ ಸ್ವಾಗತಿಸಿದರು. ಎಚ್‌.ಸಿ. ಗುಡ್ಡಪ್ಪ  ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next