Advertisement

ಗ್ರಾಮೀಣ ಭಾಗದಲ್ಲಿ ಬಸ್‌ ಸೇವೆ ಸ್ಥಗಿತ: ಕೋಲಾಹಲ: ಅರ್ಧ ದಿನದ ಕಲಾಪ ಬಲಿ

01:12 AM Dec 22, 2022 | Team Udayavani |

ಬೆಳಗಾವಿ: ಕೊರೊನಾ ಬಳಿಕ ಗ್ರಾಮೀಣ ಭಾಗದ ಬಹುತೇಕ ಕಡೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತವಾಗಿರುವುದು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ ಸೇವೆ ಇಲ್ಲದ ವಿಚಾರ ವಿಧಾನಸಭೆಯಲ್ಲಿ ಬುಧವಾರ ಕೋಲಾಹಲಕ್ಕೆ ಕಾರಣವಾಯಿತು. ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಎರಡು ಬಾರಿ ಸದನ ಮುಂದೂಡಿ ಅರ್ಧದಿನದ ಕಲಾಪ ಗದ್ದಲಕ್ಕೆ ಬಲಿಯಾಯಿತು.

Advertisement

ಕೋಲಾಹಲಕ್ಕೆ ಕಾರಣ
ಬಿಜೆಪಿಯ ಸಿದ್ದು ಸವದಿ ಅವರು ತೇರದಾಳ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಸರಿಯಾಗಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಆದಷ್ಟು ಬೇಗ ಬಸ್‌ ಸೇವೆ ಆರಂಭಿಸುವಂತೆ ಆಗ್ರಹಿಸಿದರು. ಸಚಿವ ಶ್ರೀರಾಮುಲು ಉತ್ತರಿಸಿ, ಕೊರೊನಾದಿಂದ ಸ್ಥಗಿತವಾಗಿದ್ದ ಬಸ್‌ ಸಂಚಾರವನ್ನು ಪುನರಾರಂಭಿಸುವುದು ಹಾಗೂ ಕೆಲವು ಕಡೆ ರಸ್ತೆ ಸರಿಯಾಗಿ ಇಲ್ಲದಿರುವುದರಿಂದ ಬಸ್‌ ಓಡಿಸುವುದು ಕಷ್ಟವಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಆಡಳಿತ ಹಾಗೂ ವಿಪಕ್ಷದ ಬಹುತೇಕ ಎಲ್ಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಸಭಾಧ್ಯಕ್ಷರ ಪೀಠದಲ್ಲಿದ್ದ ಕುಮಾರ ಬಂಗಾರಪ್ಪ ಅವರು, ಸರಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ, ಬಸ್‌ ಸೇವೆ ಒದಗಿಸಲಾಗುವುದು ಎಂದರು. ಆಗ, ಇಂತಹ ಉತ್ತರ ಬೇಕಾಗಿಲ್ಲ. ನಿರ್ದಿಷ್ಟವಾಗಿ ಯಾವ ದಿನಾಂಕದಂದು ಬಸ್‌ ಸೇವೆ ಒದಗಿಸಲಾಗುತ್ತದೆ ಎಂಬುದನ್ನು ಹೇಳಬೇಕು ಎಂದು ಪ್ರತಿಭಟನೆ ತೀವ್ರಗೊಳಿಸಿದರು.

ಬಳಿಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ತಮ್ಮ ಸ್ಥಾನಕ್ಕೆ ತೆರಳಿದರು. ಆದರೆ, ಕಾಂಗ್ರೆಸ್‌ನ ರಂಗನಾಥ್‌ ಅವರು ಬಾವಿಯಲ್ಲೇ ಇದ್ದು, ನಿರ್ದಿಷ್ಟ ದಿನಾಂಕ ತಿಳಿಸುವಂತೆ ಆಗ್ರಹಿಸಿದರು. ಸಚಿವರಾದ ಮಾಧುಸ್ವಾಮಿ ಹಾಗೂ ಗೋವಿಂದ ಕಾರಜೋಳ ಅವರು ತಮ್ಮ ಪೀಠಕ್ಕೆ ಹೋಗುವಂತೆ ಗಟ್ಟಿ ಧ್ವನಿಯಲ್ಲಿ ಹೇಳಿದರು. ರಂಗನಾಥ್‌ ವಿರೋಧ ವ್ಯಕ್ತಪಡಿಸಿದಾಗ, ಸಚಿವರಿಬ್ಬರೂ ಏಕವಚನ ಬಳಸಿದರು. ಆಗ ಕಾಂಗ್ರೆಸ್‌ನ ಇತರ ಸದಸ್ಯರು ರಂಗನಾಥ್‌ ನೆರವಿಗೆ ಧಾವಿಸಿ, ಸರಕಾರದ ವಿರುದ್ಧ ಘೋಷಣೆ ಕೂಗಿದರು.

Advertisement

ಸಭಾಧ್ಯಕ್ಷರ ಪೀಠದಲ್ಲಿದ್ದ ಕುಮಾರ ಬಂಗಾರಪ್ಪ ಮನವಿ ಮಾಡಿದರೂ ಧರಣಿ ನಿಲ್ಲಲಿಲ್ಲ. 10 ನಿಮಿಷಗಳ ಕಾಲ ಸದನವನ್ನು ಮುಂದೂಡಿ ಮತ್ತೆ ಆರಂಭಿಸಿದಾಗಲೂ ಪ್ರತಿಭಟನೆ ಮುಂದುವರಿಯಿತು. ಸಚಿವ ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಲೇ ಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಸದನವನ್ನು 10 ನಿಮಿಷ ಮುಂದೂಡಿ ಸಭಾಧ್ಯಕ್ಷರ ಕೊಠಡಿಯಲ್ಲಿ ಆಡಳಿತ ಹಾಗೂ ವಿಪಕ್ಷದ ನಾಯಕರ ನಡುವೆ ಸಂಧಾನ ನಡೆಸಲಾಯಿತು. ಬಳಿಕ ಕಲಾಪ ಆರಂಭಗೊಂಡಾಗ ಮುಖ್ಯಮಂತ್ರಿಗಳು, ಆರೋಪ, ಪ್ರತ್ಯಾರೋಪಗಳು ಸಾಮಾನ್ಯ. ಹೀಗಾಗಿ ಒಂದೇ ವಿಷಯದಲ್ಲಿ ಗದ್ದಲ ಮುಂದುವರಿಸಿ, ಸದನದ ಕಲಾಪ ಹಾಳು ಮಾಡುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಮಾತನಾಡಿ, ಯಾರು ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ಸದನ ಸುಸೂತ್ರವಾಗಿ ನಡೆಸುವ ಜವಾಬ್ದಾರಿ ಆಡಳಿತ ಪಕ್ಷದ ಮೇಲಿದೆ ಎಂದರು. ಅನಂತರ ಕಲಾಪ ಸುಸೂತ್ರವಾಗಿ ನಡೆಯಿತು.

ಸಚಿವ ಮಾಧುಸ್ವಾಮಿ ಆಕ್ರೋಶ
ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಚಿವ ಮಾಧುಸ್ವಾಮಿ ಮಾತನಾಡಲು ಮುಂದಾದಾಗ ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್‌ ಅಡ್ಡಿಪಡಿಸಿದರು. ಸಚಿವರು ಸಿಟ್ಟಾಗಿ, ಸದನದ ಬಾವಿಯೊಳಗಿಂದ ಮಾತನಾಡಲು ಅವಕಾಶವಿಲ್ಲ. ಇವರ ವಿರುದ್ಧ ಅಮಾನತು ನಿರ್ಣಯ ಮಂಡಿಸುತ್ತಿದ್ದೇವೆ. ಸಭಾಧ್ಯಕ್ಷರು ಈ ನಿರ್ಣಯವನ್ನು ಪಾಸ್‌ ಮಾಡಬೇಕು. ಶಾಸಕಿಯನ್ನು ಸದನದಿಂದ ಹೊರಗೆ ಕಳುಹಿಸಬೇಕು. ಸದನಕ್ಕೆ ತನ್ನದೇ ನಿಯಮವಿದೆ. ಅದರಂತೆ ನಡೆದುಕೊಳ್ಳಬೇಕು ಎಂದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಚುನಾಯಿತ ಪ್ರತಿನಿಧಿಗಳ ಹಕ್ಕುಚ್ಯುತಿ ಮಾಡುವುದೂ ಸರಿ ಯಲ್ಲ. ಇದಕ್ಕೆ ಸಚಿವ ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಬೇಕು. ಸದನದ ಒಳಗೆ ಈ ರೀತಿಯ ಗೂಂಡಾಗಿರಿ ಸಹಿಸಲು ಸಾಧ್ಯವಿಲ್ಲ.
-ಸಿದ್ದರಾಮಯ್ಯ, ವಿಪಕ್ಷ ನಾಯಕ

ಎಲ್ಲದಕ್ಕೂ ದಾಳಿ, ದೌರ್ಜನ್ಯ ಎನ್ನುವುದು ಸರಿಯಲ್ಲ. ಸ್ಪೀಕರ್‌ ಪೀಠದ ಮೇಲೇರಿ ಮೈಕ್‌ ಕಿತ್ತುಕೊಂಡಿದ್ದು ಯಾರು ಎಂಬುದು ಎಲ್ಲರಿಗೂ ತಿಳಿದಿದೆ. ಸಣ್ಣ ವಿಷಯವನ್ನು ದೊಡ್ಡದು ಮಾಡಿ, ಕಾಲಹರಣ ಮಾಡಲಾಗುತ್ತಿದೆ.
– ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next