ಬೆಂಗಳೂರು: ಕಾಂಗ್ರೆಸ್ ನಾಯಕರಿದ್ದ ರೆಸಾರ್ಟ್‌ನಿಂದ ಬುಧವಾರ ರಾತ್ರಿ ನಾಪತ್ತೆಯಾಗಿದ್ದ ಕಾಗೆವಾಡದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಇಂದು ಮುಂಬೈ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ದೇವನಹಳ್ಳಿಯ ಪ್ರಕೃತಿ ರೆಸಾರ್ಟ್‌ನಲ್ಲಿ ಇತರೇ ಕಾಂಗ್ರೆಸ್ ಶಾಸಕರ ಜೊತೆಗಿದ್ದ ಶ್ರೀಮಂತ ಪಾಟೀಲ್ ಬುಧವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಇವರ ನಾಪತ್ತೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದು, ಮುಂಬೈನ ಅಜ್ಞಾತ ಸ್ಥಳದಲ್ಲಿರುವ ಅತೃಪ್ತ ಶಾಸಕರ ಜೊತೆ ಸೇರಿರುವ ಬಗ್ಗೆ ಸಂಶಯಗಳು ವ್ಯಕ್ತವಾಗಿದ್ದವು.
ಆದರೆ ಶ್ರೀಮಂತ ಪಾಟೀಲ್ ಅವರು ಎದೆನೋವು ಕಾರಣದಿಂದ ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇತ್ತ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಅಧಿವೇಶನ ನಡೆಯುತ್ತಿದ್ದು, ಪ್ರಮುಖ ಮೂರೂ ಪಕ್ಷಗಳು ತಮ್ಮ ಶಾಸಕರಿಗೆ ಸದನಕ್ಕೆ ಹಾಜರಿರುವಂತೆ ವಿಪ್ ಜಾರಿ ಮಾಡಿವೆ. ಹೀಗಾಗಿ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಎದೆ ನೋವಿಗೆ ಕಾಗೆವಾಡದ ಶಾಸಕರು ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿದ್ದೇಕೆ ಎಂಬ ಅನುಮಾನ ಕಾಡಿದೆ.