Advertisement
ನಗರ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಚ್.ಪಿಮಂಜುನಾಥ್, ಕಳೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಮಂತ್ರಿಗಳ ಮುಂದೆ ಜಿಲ್ಲಾಧಿಕಾರಿ ಕಾರ್ಯವೈಖರಿ ಪ್ರಶ್ನಿಸಿ ಹಾಗೂ ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿದ್ದೆ. ಆದರೆ ಅದನ್ನು ತೀರ ವೈಯಕ್ತಿಕವಾಗಿ ತೆಗೆದುಕೊಂಡಿರುವ ರೋಹಿಣಿ ಸಿಂಧೂರಿ ಅವರುಕಾನೂನಿನ ಚೌಕಟ್ಟು ಮೀರಿ, ಸಭೆಯಲ್ಲಿ ನಡೆದ ಮಾತುಕತೆಗೆ ವೈಯಕ್ತಿಕವಾಗಿ ಪತ್ರ ಬರೆದು ಉತ್ತರಿಸುವ ದಾರ್ಷ್ಟ್ಯ ತೋರಿದ್ದಾರೆ. ಈ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
2 ದಿನದಲ್ಲಿ ಉತ್ತರಿಸದಿದ್ದರೆ ಡೀಸಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆ : ಶಾಸಕ ಎಚ್.ಪಿ ಮಂಜುನಾಥ್ ಅವರಿಗೆ ಬರೆದ ಪತ್ರ ವೈರಲ್ ಆದಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ರಘು ಆಚಾರ್, ನಿಮ್ಮಕಚೇರಿಯಿಂದ ಶಾಸಕರಿಗೆ ಬರೆದ ಪತ್ರ ಹೇಗೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಯಾರು ಈ ಕೆಲಸ ಮಾಡಿದ್ದು, ಒಂದು ವೇಳೆ ನೀವೆ ಮಾಡಿದ್ದರೆ ರಾಜೀನಾಮೆ ನೀಡಿ. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ಆಗಬೇಕು. ನೀವು ನಿಮ್ಮಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದರು. ಜಿಲ್ಲಾಧಿಕಾರಿಗಳ ಈ ಕ್ರಮವನ್ನು ಬಿಡುವ ಪ್ರಶ್ನೆಯೇ ಇಲ್ಲ. ಇದನ್ನು ಪರಿಷತ್ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಇನ್ನು ಎರಡು ದಿನದಲ್ಲಿ ಅವರುಕ್ಷಮೆಕೇಳಬೇಕು. ಅಥವಾ ಆ ಪತ್ರ ಹೇಗೆ ಹೊರಗೆ ಬಂತು? ಇದನ್ನು ಬಹಿರಂಗಪಡಿಸಬೇಕು.7ನೇ ತಾರೀಖು ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ. ಪರಿಷತ್ ವಿಧಾನಸಭೆಗೆ ಬಂದು ಉತ್ತರಕೊಡಲಿ ಎಂದು ತಿಳಿಸಿದರು.
ನನ್ನ ಎದುರಿಸುವೆ ಎಂಬ ಭ್ರಮೆ ಬಿಟ್ಟು ಬಿಡಿ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನನಗೆ ಪತ್ರ ಬರೆಯುವ ಮೂಲಕ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಜಮೀನಿಗೆ ಸಂಬಂಧಿಸಿದ ಖಡತಗಳು ನನ್ನ ಬಳಿ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ. ನನಗೆ ಪತ್ರ ಬರೆದು ಜಿಲ್ಲೆಯ ಜನಪ್ರತಿನಿಧಿಗಳು ಬಾಯಿ ಮುಚ್ಚಿಕೊಳ್ಳುವಂತೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಇದು ನನ್ನೊಬ್ಬನಿಗೆ ಬರೆದ ಪತ್ರವಲ್ಲ.ಕೆಡಿಪಿ ಸಭೆಯಲ್ಲಿ ಆದ ಚರ್ಚೆಗೆ ನನ್ನ ಜಮೀನು ವಿಚಾರ ಬರೆದಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ. ನಮ್ಮ ಅಪ್ಪನ ಆಸ್ತಿ ತಗೋಳ್ಳೋದು ನಮಗೆ ಗೊತ್ತಿದೆ. ಈ ಬೆದರಿಕೆ ತಂತ್ರಕ್ಕೆ ನಾನು ಹೆದರುವುದಿಲ್ಲ. ನನ್ನನ್ನ ಎದುರಿಸುವ ಭ್ರಮೆಯಿಂದ ಹೊರಗೆ ಬನ್ನಿ ಎಂದು ಶಾಸಕ ಮಂಜುನಾಥ್ ಹೇಳಿದರು.
ಇಬ್ಬರು ಸಿಎಂ ಬೆನ್ನಿಗಿದ್ದಾರೆ ಎಂದು ತಲೆ ತಿರುಗಿಸಬೇಡಿ : ಎರಡು ರಾಜ್ಯದ ಮುಖ್ಯಮಂತ್ರಿಗಳು ನಿಮ್ಮ ಬೆನ್ನಿಗೆ ಇದ್ದಾರೋ ಅಥವಾ ಕಾಲ ಕೆಳಗೆ ಇದ್ದಾರೋ ಗೊತ್ತಿಲ್ಲ. ಹಾಗೇನಾದರೂ ಇದ್ದರೆ ತಲೆ ತಿರುಗಿಸುವುದನ್ನು ಬಿಡಿ.ಕಾಲ ಹೀಗೆ ಇರುವುದಿಲ್ಲ ಮಂಜುನಾಥ್ ಎಚ್ಚರಿಕೆ ನೀಡಿದರು. ರೋಹಿಣಿ ಸಿಂಧೂರಿಯವರು ಒಂದಲ್ಲ ಒಂದು ದಿನ ಕಾನೂನಿನ ಪ್ರಕ್ರಿಯೆಯಲ್ಲಿ ಸಿಲುಕುತ್ತೀರ. ಆಗ ನಿಮಗೆ ಕಾನೂನಿನ ಅರಿವಾಗುತ್ತದೆ. ನೀವು ಕಾನೂನಿಗಿಂತ ದೊಡ್ಡವರಲ್ಲ. ನಿಮ್ಮನ್ನ ಪ್ರಶ್ನೆ ಮಾಡೋಕು ನಿಮ್ಮ ಮೇಲೆ ಅಧಿಕಾರಿಗಳಿದ್ದಾರೆ. ಅವರಿಗೂ ನೀವು ಉತ್ತರಕೊಡಬೇಕು. ನಾನು ಹಿರಿಯ ಸಲಹೆ ಪಡೆದುಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ಶಿಷ್ಟಾಚಾರ ಉಲ್ಲಂಘನೆ, ಪತ್ರ ಬರೆದಿರುವುದು ಎಲ್ಲದರಕುರಿತುಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಮಹಾರಾಣಿ ಅಂದಿದ್ದರಲ್ಲಿತಪ್ಪೇನು?: ಮಂಜುನಾಥ್ ಸಭೆಯಲ್ಲಿ ಮೂರನೇ ಮಹಾರಾಣಿ ಆಗಬೇಡಿ, ಮಹಾರಾಣಿರೀತಿ ವರ್ತಿಸಬೇಡಿ ಎಂದಿದ್ದೆ. ಅದರಲ್ಲಿ ತಪ್ಪೇನು. ಆದರೆ ನೀವು ಪತ್ರದಲ್ಲಿ ಈ ಹೇಳಿಕೆ ಒಬ್ಬ ಶಾಸಕರಿಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದ್ದೀರಿ. ನಮಗೆ ಪಾಠ ಮಾಡಲು ಬರಬೇಡಿ. ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ತಾವೆ ಪ್ರತ್ಯೇಕವಾಗಿ ಏಕೆ ತಾಲೂಕು ಮಟ್ಟದಲ್ಲಿ ಜನ ಸ್ಪಂದನ ಸಭೆ ಮಾಡಬೇಕು ಎಂದು ಪ್ರಶ್ನಿಸಿದ ಶಾಸಕ ಮಂಜುನಾಥ್, ರೋಹಿಣಿ ಸಿಂಧೂರಿಯವರು ಎಲ್ಲ ಕಡೆ ಜನಪ್ರತಿನಿಧಿಗಳಿಗೆ ಪರ್ಯಾಯವಾಗಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಮಂಡ್ಯ, ಹಾಸನದಲ್ಲೂ ನಡೆದಿದೆ. ಮೈಸೂರಿನಲ್ಲಿ ಇದೀಗ ಆ ಸಂಸ್ಕೃತಿ ಸೃಷ್ಟಿಯಾಗಿದೆ. ರೋಹಿಣಿ ಸಿಂಧೂರಿಯವರು ಜನಪ್ರತಿನಿಧಿಗಳ ಹಕ್ಕನ್ನ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.