ಮಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಓಲೈಕೆಗೆ ತನ್ನ ಕ್ಷೇತ್ರದಲ್ಲಿ ಸೀರೆ,ಪುಸ್ತಕ ವಿತರಿಸಿ ಸುದ್ದಿ ಮಾಡಿದ್ದ ಮಂಗಳೂರು ನಗರ ಉತ್ತರ ಶಾಸಕ ಬಿ.ಎ. ಮೊದಿನ್ ಬಾವಾ ಅವರು ಈಗ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಸಾಮರಸ್ಯದ ಹೆಸರಲ್ಲಿ ಅಭಿವೃದ್ಧಿ ಯೋಜನೆಗಳ ಪ್ರಚಾರದ ನಡಿಗೆಯಲ್ಲಿ ನಿರತರಾಗಿರುವ ಮೊದಿನ್ ಬಾವಾ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿಕುರಿತ ಹಾಡೊಂದರ ಧಾಟಿಯನ್ನು ನಕಲು ಮಾಡಿ ಹಿಂದೂ ಸಮುದಾಯಕ್ಕೆ ಅವಮಾನಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
ತನ್ನ ಕ್ಷೇತ್ರದಲ್ಲಿ ತನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿಯನ್ನು ಪ್ರಚುರಪಡಿಸುವ ದೃಷ್ಟಿಯಿಂದ ಹಾಡೊಂದನ್ನು ನಿರ್ಮಾಣ ಮಾಡಿದ್ದು, ಈ ಹಾಡಿಗೆ ಹಿಂದೂ ಸಮುದಾಯ ಆರಾಧಿಸುವ ಅಯ್ಯಪ್ಪ ಸ್ವಾಮಿಯ ಕುರಿತ ಹಾಡಿನ ಧಾಟಿಯನ್ನು ನಕಲು ಮಾಡಿ ಬಳಸಲಾಗಿದೆ. ಶಾಸಕ ಮೊದಿನ್ ಬಾವಾ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿ ಕುರಿತ ಸಾಹಿತ್ಯವಿರುವ ಹಾಡು ರಚಿಸಲಾಗಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿಯನ್ನು ಹೊಗಳುವ “ಕಲ್ಲು ಮುಳ್ಳು ಪಾದಕ್ಕೆ ಹೂ’ ಧಾಟಿಯಲ್ಲಿ “ಕಲ್ಲು ಮುಳ್ಳು ತೋಜುನೆ ಇಜ್ಜಿ’ (ಕಲ್ಲು, ಮುಳ್ಳು ತೋರುವುದಿಲ್ಲ) ಎಂಬ ಸಾಹಿತ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಇದು ಶಾಸಕ ಬಾವಾ ಅವರು ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹಿಂದೂ ಸಂಘಟನೆಗಳ ಮುಖಂಡರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರೋಳಿ ಜೋಡುಕಟ್ಟೆಯ ಅಯ್ಯಪ್ಪ ಸೇವಾ ಟ್ರಸ್ಟ್ ವತಿಯಿಂದ ಅಯ್ಯಪ್ಪ ಭಕ್ತರು ಶುಕ್ರವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾ ಧಿಕಾರಿಗೆ ದೂರು ಸಲ್ಲಿಸಿದರು. ಅಯ್ಯಪ್ಪ ಭಕ್ತಿ ಗೀತೆಯನ್ನು ರಾಜಕೀಯ ಉದ್ದೇಶಕ್ಕಾಗಿ ವಿಕೃತಗೊಳಿಸಲಾಗಿದೆ ಎಂದು ಶಾಸಕ ಮೊದಿನ್ ಬಾವಾ ವಿರುದ್ಧ ಆರೋಪ ಹೊರಿಸಲಾಗಿದೆ.
ಬಜರಂಗದಳ ಖಂಡನೆ
ಶಾಸಕ ಮೊದಿನ್ ಬಾವಾ ಅವರ ಈ ಕ್ರಮ ಖಂಡನೀಯ ಎಂದು ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್ ಅವರು ತಿಳಿಸಿದ್ದಾರೆ. ಹಿಂದೂಗಳ ಮತ ಬೇಟೆಗಾಗಿ ಮೃದು ಹಿಂದುತ್ವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದ್ದು, ಇದನ್ನು ಗಮನಿಸಿ ಹಿಂದೂಗಳು ಯಾವತ್ತೂ ಕಾಂಗ್ರೆಸ್‌ಗೆ ಮತ ಹಾಕಲಾರರು ಎಂದಿದ್ದಾರೆ.
ಹಿಂದೂಗಳ ಧಾರ್ಮಿಕ ಭಾವನೆಗೆ ನೋವಾಗಿದೆ. ಹಾಗಾಗಿ ಶಾಸಕರು ಮತ್ತು ಈ ಹಾಡನ್ನು ಪ್ರಚಾರ ಮಾಡುವವರ ವಿರುದ್ಧ ಪೊಲೀಸರು ಕ್ರಮ ಜರಗಿಸಬೇಕು ಎಂದವರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮಾತ್ರವಲ್ಲ, ಯಾವುದೇ ರಾಜಕೀಯ ಪಕ್ಷ ಯಾವುದೇ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು ಎಂದು ಮನವಿ ಮಾಡಿದ್ದಾರೆ.