ಪುದುಚೇರಿ : ನಾಳೆ (ಫೆ.22) ಬಹುಮತ ಸಾಬೀತುಪಡಿಸಲು ಸಿದ್ಧತೆ ನಡೆಸಿರುವ ಸಿಎಂ ವಿ.ನಾರಾಯಣಸ್ವಾಮಿ ಅವರಿಗೆ ದೊಡ್ಡ ಆಘಾತವಾಗಿದೆ. ತಮ್ಮ ಮೈತ್ರಿ ಸರ್ಕಾರದ ಕಾಂಗ್ರೆಸ್ ಹಾಗೂ ಡಿಎಂಕೆಯ ಇಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ಇಂದು ( ಫೆ.21) ರಾಜೀನಾಮೆ ಸಲ್ಲಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಪುದುಚೇರಿಯಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿ ಸರ್ಕಾರ ಪತನವಾಗುವ ಲಕ್ಷಣ ಗೋಚರಿಸುತ್ತಿವೆ. ಈಗಾಗಲೇ ಆಡಳಿತಾರೂಢದ ಉಭಯ ಪಕ್ಷಗಳ ಕೆಲ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಪಾಳಯಕ್ಕೆ ಜಿಗಿದಿದ್ದಾರೆ. ಈ ಪಕ್ಷಾಂತರ ಪರ್ವ ಇನ್ನೂ ಮುಂದುವರೆದಿದ್ದು, ಇಂದೂ ಕೂಡ ಕಾಂಗ್ರೆಸ್ ಹಾಗೂ ಡಿಎಂಕೆಯ ಇಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕೆ. ಲಕ್ಷ್ಮೀನಾರಾಯಣನ್ ಹಾಗೂ ಡಿಎಂಕೆಯ ವೆಂಕಟೇಶನ್ ತಮ್ಮ ರಾಜೀನಾಮೆ ಪತ್ರವನ್ನು ವಿಧಾನಸಭೆಯ ಸ್ಪೀಕರ್ ವಿಪಿ ಶಿವಕೊಂಜ್ಹುಂಡು ಅವರಿಗೆ ಸಲ್ಲಿಸಿದ್ದಾರೆ. ಇವರೂ ಸಹ ಬಿಜೆಪಿ ಪಕ್ಷ ಸೇರುವ ಸಾಧ್ಯತೆ ಕೇಳಿ ಬರುತ್ತಿದೆ.
ಇನ್ನು ಫೆ.22 ರಂದು ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಬಹುಮತ ಸಾಬೀತುಪಡಿಸಬೇಕಿದೆ. ಈಗಾಗಲೇ ಅವರ ಸರ್ಕಾರ ಅಲ್ಪಮತಕ್ಕೆ (11 ಶಾಸಕರು) ಕುಸಿದಿದ್ದು, ಪತನವಾಗುವುದು ಪಕ್ಕಾ ಎನ್ನಲಾಗುತ್ತಿದೆ. ವಿರೋಧ ಪಕ್ಷದ ಶಾಸಕರ ಸಂಖ್ಯೆ 14 ಇದೆ.