Advertisement

ಕಾಂಗ್ರೆಸ್‌ ಸಚಿವರ ಫೈನಲ್‌ ಪಟ್ಟಿ;ಜಯಮಾಲಾಗೆ ಅದೃಷ್ಟ,ಜಮೀರ್‌ಗೂ ಸ್ಥಾನ

09:52 AM Jun 06, 2018 | Team Udayavani |

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು  ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಸಚಿವರ ಪಟ್ಟಿಯನ್ನು ಅಂತಿಮ ಗೊಳಿಸಿದ್ದು, ಪಟ್ಟಿಯಲ್ಲಿ ಕೆಲವು ಅಚ್ಚರಿಯ ಆಯ್ಕೆಗಳಿದ್ದು, ಪ್ರಬಲ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಅಳೆದು ತೂಗಿ ಜಾತಿವಾರು, ಜಿಲ್ಲಾವಾರು ಅವಕಾಶ ಕಲ್ಪಿಸಲಾಗಿದೆ.  

Advertisement

ಡಾ.ಜಿ.ಪರಮೇಶ್ವರ್‌ ಅವರು 16 ಮಂದಿ ಸಚಿವರ ಅಂತಿಮ ಪಟ್ಟಿಯೊಂದಿಗೆ ಬುಧವಾರ ಬೆಳಗ್ಗೆ ಆಗಮಿಸಿದ್ದು, ಅವರ ಸದಾಶಿವ ನಗರ ನಿವಾಸದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. 

ಪರಮೇಶ್ವರ್‌ ಅವರು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಟ್ಟಿ ಯನ್ನು ನೀಡಿ ಚರ್ಚೆ ನಡೆಸಿ ಆ ಬಳಿಕ ಎರಡೂ ಪಕ್ಷದ ಪಟ್ಟಿಯನ್ನು ಒಟ್ಟು ಮಾಡಿ ರಾಜಭವನಕ್ಕೆ ಕಳುಹಿಸಲಿದ್ದಾರೆ. 

ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್‌ ಅವರು ಯಾವುದೇ ಹೆಸರುಗಳನ್ನು ಹೇಳಲು ನಿರಾಕರಿಸಿ ಎಲ್ಲವೂ ಗೌಪ್ಯವಾಗಿರುವುದನ್ನು ಸೂಚಿಸಿದರು. 

ಸಂಭಾವ್ಯ ಸಚಿವರ ಪಟ್ಟಿ ಇಂತಿದೆ

Advertisement

ಸಚಿವೆಯಾಗುವ ಮತ್ತೊಬ ನಟಿ !

ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯೆ ಹಿರಿಯ ನಟಿ ಜಯಮಾಲ ಅವರು ಅಚ್ಚರಿಯ ಅವಕಾಶ ಪಡೆದಿದ್ದಾರೆ.ಜಯಮಾಲಾ ಅವರು ಪರಿಷತ್‌ ಸದಸ್ಯತ್ವ ಹೊಂದಿದ್ದು,ಈಡಿಗ ಸಮುದಾಯದವರಾಗಿರುವ ಕಾರಣ ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಕೋಟಾದಲ್ಲಿ ದಲಿತ ಸಮುದಾಯಕ್ಕೆ ಸೇರಿದ  ಸಂಸದ ಕೆ.ಎಚ್‌.ಮುನಿಯಪ್ಪ  ಪುತ್ರಿ ರೂಪಾ ಶಶಿಧರ್‌ ಅವರ ಹೆಸರು ಕೇಳಿ ಬಂದಿತ್ತು. ಆದರೆ ಹೈಕಮಾಂಡ್‌ ಮೊದಲ ಬಾರಿಯ ಶಾಸಕಿಯಾಗಿರುವ ಹಿನ್ನಲೆಯಲ್ಲಿ ಅವಕಾಶ ನೀಡಿಲ್ಲ ಎನ್ನಲಾಗಿದೆ. 

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಅವರಿಗೆ  ಮುಸ್ಲಿಂ ಕೋಟಾದಲ್ಲಿ ಅವಕಾಶ ನೀಡಲಾಗಿದೆ. ಮಂಗಳೂರು ಶಾಸಕ ಯು.ಟಿ.ಖಾದರ್‌ ಅವರಿಗೆ ನಿರೀಕ್ಷೆಯಂತೆ ಸಚಿವ ಸ್ಥಾನ ಲಭಿಸಿದೆ.ಕಾಂಗ್ರೆಸ್‌ ಹಿರಿಯ ಶಾಸಕರಾಗಿರುವ ರೋಷನ್‌ ಬೇಗ್‌, ಹ್ಯಾರಿಸ್‌ ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿರದಿರುವುದು ಅಚ್ಚರಿ ಮೂಡಿಸಿದೆ. 

ಒಕ್ಕಲಿಗ ಕೋಟಾದಲ್ಲಿ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್‌,ಕೃಷ್ಣ ಭೈರೇಗೌಡ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.

ಹಿರಿತನದ ಆಧಾರದಲ್ಲಿ ಹಳಿಯಾಳ ಶಾಸಕ ಆರ್‌ವಿ ದೇಶ್‌ಪಾಂಡೆ(ಗೌಡ ಸಾರಸ್ವತ ಬ್ರಾಹ್ಮಣ)ಅವರಿಗೆ ಅವಕಾಶ ದೊರಕಿದೆ. 

ಲಿಂಗಾಯತ ಕೋಟಾದಡಿ ರಾಜಶೇಖರ್‌ ಪಾಟೀಲ್‌ ಹುಮ್ನಾಬಾದ್‌, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್‌ ಅವರಿಗೆ ಅವಕಾಶ ನೀಡಲಾಗಿದೆ. ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್‌ ಅವರ ಹೆಸರನ್ನು ಪರಿಗಣಿಸದಿರುವುದು ಅಚ್ಚರಿ ಮೂಡಿಸಿದೆ. 

ಕೆ.ಜೆ. ಜಾರ್ಜ್‌ ಅವರಿಗೆ ನಿರೀಕ್ಷೆಯಂತೆ ಕ್ರಿಶ್ಚಿಯನ್‌ ಕೋಟಾ ಮತ್ತು ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ದೊರಕಿದೆ. 

 ಗೌರಿ ಬಿದನೂರು ಶಾಸಕ ಶಿವಶಂಕರ್‌ ರೆಡ್ಡಿ ಅವರಿಗೆ ಹಿರಿತನ ಮತ್ತು ರೆಡ್ಡಿ ಕೋಟಾದಲ್ಲಿ ಸಚಿವ ಸ್ಥಾನ ದೊರಕಿದೆ. ರಾಮಲಿಂಗಾ ರೆಡ್ಡಿ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ. 

ವಾಲ್ಮೀಕಿ (ಎಸ್‌ಟಿ) ಸಮಾಜ ದ ಕೋಟಾದಲ್ಲಿ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಅವಕಾಶ ನೀಡಲಾಗಿದೆ. 

ದಲಿತ ಕೋಟಾದಲ್ಲಿ  ಪ್ರಿಯಾಂಕ ಖರ್ಗೆ ಅವರಿಗೆ ಸ್ಥಾನ ಕಲ್ಪಿಸಲಾಗಿದ್ದು, ಚಾಮರಾಜನಗರದ ಪುಟ್ಟರಂಗ ಶೆಟ್ಟಿ (ಉಪ್ಪಾರ ಸಮುದಾಯ) ಅವರಿಗೆ ಅವಕಾಶ ಕಲ್ಪಿಸಲಾಗಿದೆ. 

ರಾಣೆ ಬೆನ್ನೂರು ಪಕ್ಷೇತರ(ಕೆಪಿಜೆಪಿ)ಶಾಸಕ ಶಂಕರ್‌ ಅವರಿಗೆ ಕುರುಬ ಕೋಟಾದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪಾವಗಡ ಶಾಸಕ ಭೋವಿ ಜನಾಂಗದ ವೆಂಕಟರಮಣಪ್ಪ ಮತ್ತು ಬಳ್ಳಾರಿಯ ಸಂಡೂರು ಶಾಸಕ ತುಕಾರಾಂ ಅವರ ಹೆಸರು ಸಚಿವರ ಪಟ್ಟಿಯಲ್ಲಿ ಇತ್ತು ಎಂದು ಈ ಮೊದಲು ವರದಿಯಾಗಿತ್ತು, ಆದರೆ ಕೊನೆ ಹಂತದಲ್ಲಿ ಅವರ ಹೆಸರುಗಳನ್ನು ಕೈಬಿಟ್ಟು ಹಿರಿಯರಿಗೆ ಮಣೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next