ಉಡುಪಿ: ಜಾತಿ, ಧರ್ಮ, ಭೌಗೋಳಿಕ, ಪ್ರಾದೇಶಿಕವಾಗಿ ಉತ್ತರ, ದಕ್ಷಿಣ ಎಂಬಂತೆ ವಿಭಜಿಸಿ ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ದೂರಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ಕೊಡುವ ಮಾತನಾಡುತ್ತಿದೆ. ಎಲ್ಲ ಮಹಿಳೆಯರಿಗೆ ನೀಡಲು 75 ಲಕ್ಷ ಕೋ.ರೂ. ಬೇಕು. ಇಷ್ಟೊಂದು ಹಣವನ್ನು ಎಲ್ಲಿಂದ ತರಲಿದೆ ಎಂದು ಸ್ಪಷ್ಟಪಡಿಸಬೇಕು. ಸಮಾಜ, ದೇಶ ಹಾಗೂ ಕುಟುಂಬವನ್ನು ಮುನ್ನಡೆಸುವ ಮಹಿಳೆಯರನ್ನು ಇನ್ನು ಮೋಸ ಮಾಡಲಾಗದು ಎಂದರು.
ಇದು ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಚುನಾವಣೆ. 2014ರ ಮೊದಲು ಗಂಭೀರ ಸ್ಥಿತಿಯಲ್ಲಿದ್ದ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೋದಿ ಸರಕಾರ ಸುಧಾರಿಸಿ, ಇದೀಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪಿಸಿದೆ.
ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಅನ್ನಯೋಜನ, ಜಲ ಜೀವನ್ ಮಿಷನ್ ಅಡಿ ಮನೆ ಮನೆಗೆ ನಲ್ಲಿ ನೀರು, ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆ ಜತೆಗೆ ಆತ್ಮಗೌರವ ಹೆಚ್ಚುವಂತೆ ಮಾಡಲಾಗಿದೆ ಎಂದರು.
ಲಾಜಿಸ್ಟಿಕ್ ಕ್ಷೇತ್ರದ ಬದಲಾವಣೆ ಹಾಗೂ ಸಾಗರ್ ಮಾಲಾ ಯೋಜನೆ ಯಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಮೋದಿ ಸರಕಾರ ಏನು ಹೇಳುತ್ತದೋ ಅದನ್ನು ಮಾಡುತ್ತದೆ. ಕಾಂಗ್ರೆಸಿಗರು ಸುಳ್ಳು ಹಬ್ಬಿಸುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿ ಮೋದಿಯವರು ಸೇವೆ ಸಲ್ಲಿಸುತ್ತಿದ್ದಾರೆ. ವಿಕಸಿತ ಭಾರತ ಸಂಕಲ್ಪದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶ ವಿಭಜನೆಯ ಮಾತನಾಡುವವರು ಹಾಗೂ ಸ್ವಾರ್ಥಕ್ಕಾಗಿ ಇರುವವರ ಬಗ್ಗೆ ಎಚ್ಚರ ಅಗತ್ಯ ಎಂದು ಎಚ್ಚರಿಸಿದರು.