Advertisement

ವಿಧಾನಪರಿಷತ್ತು: ಈಶ್ವರಪ್ಪ ರಾಜಿನಾಮೆಗೆ ಕಾಂಗ್ರೆಸ್‌ ಪಟ್ಟು

08:32 PM Feb 18, 2022 | Team Udayavani |

ವಿಧಾನಪರಿಷತ್ತು: ರಾಷ್ಟ್ರಧ್ವಜಕ್ಕೆ ಅಪಚಾರ ಎಸಗಿರುವ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ವಿರುದ್ಧ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರಿಂದ ಶುಕ್ರವಾರದ ಕಲಾಪವೂ ಬಲಿ ಆಯಿತು. ಪ್ರತಿಭಟನೆ, ಗಲಾಟೆ ಸತತ ಮೂರನೇ ದಿನದ ಕಾರ್ಯಕಲಾಪಗಳನ್ನು ಆಹುತಿ ಪಡೆದುಕೊಂಡಿತು.

Advertisement

ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಶಾಸಕ ಮಳ್ಳೂರ್‌ ಆನಂದರಾವ್‌ ಅವರ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯ ಮುಗಿದ ಬಳಿಕ ಸಭಾಪತಿ ಬಸವರಾಜ್‌ ಹೊರಟ್ಟಿ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಆದರೆ, ಕಾಂಗ್ರೆಸ್‌ ಸದಸ್ಯರು ಇದಕ್ಕೆ ಒಪ್ಪಲಿಲ್ಲ.

ಕಾಂಗ್ರೆಸ್‌ ಸದಸ್ಯ ಸಲೀಂ ಅಹ್ಮದ್‌ ಮಾತನಾಡಿ, ಸಚಿವ ಈಶ್ವರಪ್ಪ ರಾಜಿನಾಮೆ ಕೊಡಬೇಕು ಅಲ್ಲಿವರೆಗೆ ಪ್ರತಿಭಟನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು. ಆಗ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡರು. ಸದನದಲ್ಲೇ ಇದ್ದರೂ, ಅಷ್ಟೊಂದು ಗಲಾಟೆ ನಡೆದರೂ ಈಶ್ವರಪ್ಪ ಒಂದೇ ಒಂದು ಮಾತನಾಡಿಲ್ಲ.

ಕಾಂಗ್ರೆಸ್‌ ವಾದ ಒಪ್ಪದ ಸಭಾಪತಿಯವರು ಪ್ರತಿಭಟನೆ ಕೈಬಿಟ್ಟು ಕಲಾಪ ನಡೆಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಒಪ್ಪದ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಈ ವೇಳೆ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಬಿಜೆಪಿ ಹಾಗೂ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಇದರ ಮಧ್ಯೆಯೇ ಪ್ರಶ್ನೋತ್ತರ ಆರಂಭಿಸಲಾಯಿತು. ಮೊದಲ ಪ್ರಶ್ನೆಗೆ ಕರೆದಾಗ ಗಲಾಟೆ ಹೆಚ್ಚಾಯಿತು.
ಈ ಮಧ್ಯೆ ಬಿಜೆಪಿ ಸದಸ್ಯರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು.

ಪ್ರಧಾನಿ ಮೋದಿ ಹಾಗೂ ಗೃಹ ಸಚಿವರ ವಿರುದ್ಧ ಸಲೀಂ ಅಹ್ಮದ್‌ ಧಿಕ್ಕಾರ ಹೇಳಿದರು. ಸದನದಲ್ಲಿ ಬಾವಿಯೊಳಗಿದ್ದ ಕಾಂಗ್ರೆಸ್‌ ಸದಸ್ಯರು ತಮ್ಮ ಆಸನಗಳಿಗೆ ಬಂದು ಪ್ರಧಾನಿ, ಗೃಹ ಸಚಿವರ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು.

Advertisement

ಪುನಃ ಕಲಾಪ ಸೇರಿದಾಗ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ದೇಶದ ಪ್ರಧಾನಿ ಹಾಗೂ ಗೃಹ ಮಂತ್ರಿ ವಿರುದ್ಧ ಧಿಕ್ಕಾರ ಕೂಗಿದ ಸಲೀಂ ಅಹ್ಮದ್‌ ವಿರುದ್ಧ ದೇಶದ್ರೋಹದ ಕೇಸ್‌ ಅವರನ್ನು ಸದನದಿಂದ ಹೊರಹಾಕಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿ, ಜೈಶ್ರೀರಾಮ್‌, ಹಿಂದೂ ವಿರೋಧಿ ಕಾಂಗ್ರೆಸ್‌ ಪಕ್ಷಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಈ ವೇಳೆ ಕಾಂಗ್ರೆಸ್‌-ಬಿಜೆಪಿ ಸದಸ್ಯರ ನಡುವೆ ಈ ವೇಳೆ ಮಾತಿನ ಚಕಮಕಿ ನಡೆಯಿತು. ಕಲಾಪ ಮುಂದುವರಿಸುವಂತೆ ಜೆಡಿಎಸ್‌ ಸದಸ್ಯರು ಮನವಿ ಮಾಡಿದರು.

ಸಭಾಪತಿ ಆಕ್ಷೇಪ: ಪ್ರಧಾನಿ ವಿರುದ್ಧ ಧಿಕ್ಕಾರ ಕೂಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿ ಇಡೀ ದೇಶಕ್ಕೆ ಸಂಬಂಧಿಸಿದವರು. ಪಕ್ಷ ಆಧರಿಸಿ ಅವರನ್ನು ಟೀಕಿಸುವುದು ನಾನು ಒಪ್ಪುವುದಿಲ್ಲ. ಅದೇ ರೀತಿ ಈ ಸದನದ ಸದಸ್ಯರಲ್ಲದವರ ಹೆಸರು ಪ್ರಸ್ತಾಪಿಸುವುದು ಸರಿಯಲ್ಲ. ಇದೂ ಎರಡೂ ಪಕ್ಷದವರಿಗೂ ಹೇಳುತ್ತಿದ್ದೇನೆ ಎಂದರು. ನಮ್ಮ ಪಕ್ಷದ ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದರೆ ನಾವು ಸುಮ್ಮನಿರಬೇಕೇ, ಮೊದಲು ಧಿಕ್ಕಾರ ಕೂಗಿದ್ದು ಬಿಜೆಪಿಯವರು ಎಂದು ಕಾಂಗ್ರೆಸ್‌ ಸದಸ್ಯರು ತಮ್ಮನ್ನು ಸಮರ್ಥಿಸಿಕೊಂಡರು. ಏನೇ ಇರಲಿ ಈ ಸದನದ ಸದಸ್ಯರಲ್ಲದವರ ವಿರುದ್ಧ ಟೀಕೆ ಮಾಡಿರುವುದನ್ನು ಕತಡದಿಂದ ತೆಗೆದುಹಾಕಲಾಗಿದೆ ಎಂದರು ಘೋಷಿಸಿದರು.

ನೋವಿನಿಂದ ಸದನ ಮುಂದೂಡುತ್ತಿದ್ದೇನೆ: ಹೊರಟ್ಟಿ
ಈ ಮಧ್ಯೆ ಮಾಜಿ ಉಪಸಭಾಪತಿ ಹಾಗೂ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್‌, ನಿಲುವಳಿ ಸೂಚನೆ ಬಗ್ಗೆ ಸರ್ಕಾರದಿಂದ ಕಾನೂನು ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ. ಸಭಾಪತಿಯವರು ರೂಲಿಂಗ್‌ ನೀಡಿದ್ದಾರೆ. ಸಭಾಪತಿ ರೂಲಿಂಗ್‌ ಮೀರಿ ನಡೆದುಕೊಳ್ಳುವುದು ಪೀಠಕ್ಕೆ ಅಗೌರ ತೋರಿದಂತೆ. ಕಾಂಗ್ರೆಸ್‌ ಸದಸ್ಯರು ಕೇವಲ ರಾಜಕಾರಣ ಮಾಡುತ್ತಿದ್ದಾರೆ. ಅವರ ರಾಜಕಾರಣಕ್ಕೆ ಕಲಾಪ ಬಲಿ ಆಗುವುದು ಬೇಡ. ಪೀಠಕ್ಕೆ ಅಗೌರ ತೋರಿದ ಕಾಂಗ್ರೆಸ್‌ ಸದಸ್ಯರನ್ನು ನಿಯಂತ್ರಿಸಿ ಅಥವಾ ಸದನದಿಂದ ಹೊರಗೆ ಹಾಕಿ ಸದನ ಮುಂದುವರಿಸಿ ಎಂದು ಮನವಿ ಮಾಡಿದರು. ನಿಮ್ಮ ಮಾತನ್ನು ಒಪ್ಪುತ್ತೇನೆ. ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಸದನ ಚೆನ್ನಾಗಿ ನಡೆಯಬೇಕು ಎಂಬುದು ನನ್ನ ಆಸೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಬಹಳ ನೋವಿನಿಂದ ಸದನವನ್ನು ಸೋಮವಾರ ಬೆಳಿಗ್ಗೆ 11ಕ್ಕೆ ಮುಂದೂಡುತ್ತಿದ್ದೇನೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next