ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಅನಿಲ್ ಲಾಡ್ ಬಂಡಾಯದ ಬಾವುಟ ಹಾರಿಸಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2022 ನ.7 ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಯಾದಾಗ ನಗರ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ, ಕೇವಲ ಆರು ತಿಂಗಳ ಹಿಂದೆ ಬಂದ ನಾರಾ ಭರತ್ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರಿಗೆ ಯಾವ ಮಾನದಂಡ ಆಧರಿಸಿ ಟಿಕೆಟ್ ನೀಡಲಾಗಿದೆ. ಕಲಘಟಗಿಯಲ್ಲಿ 25 ಸಾವಿರ ಮತಗಳ ಅಂತರದಿಂದ ಪರಾಭವಗೊಂಡ ಸಂತೋಷ್ ಲಾಡ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ 60 ಸಾವಿರ ಮತ ಪಡೆದಿದ್ದ ಮುರಳಿಕೃಷ್ಣ ಅವರಿಗೆ ಟಿಕೆಟ್ ನೀಡದೆ, ಚುನಾವಣೆಯಿಂದ ದೂರ ಉಳಿದಿದ್ದ ಮಾಜಿ ಶಾಸಕ ಬಿ.ಎಂ.ನಾಗರಾಜ್ ಅವರಿಗೆ ನೀಡಲಾಗಿದೆ. ಪಕ್ಷಕ್ಕಾಗಿ ದುಡಿದವರನ್ನು ಪರಿಗಣಿಸಿಲ್ಲ ಎಂದವರು ಆರೋಪಿಸಿದರು.
ಇದನ್ನೂ ಓದಿ:ನಾಮಪತ್ರ ಸಲ್ಲಿಸಿದ ಅರುಣ್ ಪುತ್ತಿಲ ; ಮೆರವಣಿಗೆಯಲ್ಲಿ ಜನಸ್ತೋಮ
ಭರತ್ ರೆಡ್ಡಿ ಕುಕ್ಕರ್ ಕೊಟ್ಟಿದ್ದಾರಂತ, ಅಥವಾ ಸಮೀಕ್ಷೆ ಸೇರಿ ಯಾವ ಆಧಾರದಲ್ಲಿ ನಾರಾ ಭರತ್ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬುವುದನ್ನು ಪಕ್ಷ ಸ್ಪಷ್ಟ ಪಡಿಸಬೇಕು. 2022 ನ.07 ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ವೇಳೆ ಅವರು ನೀವೇ ಅಭ್ಯರ್ಥಿ ಎಂದು ಹೇಳಿದ್ದರು. ಆದರೆ, ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ. ಹೀಗಾಗಿ, ಈ ಚುನಾವಣೆ ನನ್ನ ಭವಿಷ್ಯದ ಪ್ರಶ್ನೆಯಾಗಿದ್ದು, ಜನರ ಅಭಿಪ್ರಾಯ ಮೇಲೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಏ.20ರಂದು ನಾಮಪತ್ರ ಸಲ್ಲಿಸಲಾಗುವುದು. ಕಾಂಗ್ರೆಸ್ ನಿಂದ ಅನ್ಯಾಯವಾದ ಹಿನ್ನೆಲೆ ಚುನಾವಣೆಯಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರಚಾರ ನಡೆಸಲಾಗುವುದು ಎಂದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಹರ್ಷದ್, ಲಕ್ಷ್ಮಣ, ಮಲ್ಲಿಕಾರ್ಜುನ ಸೇರಿ ಹಲವರು ಇದ್ದರು.