ಕಾಪು: ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆ ದೇಶದ ಸಮಗ್ರತೆ ಮತ್ತು ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದ್ದು, ದೇಶದ ಹಿತಕ್ಕೆ ಗಂಡಾಂತರಕಾರಿಯಾಗಿದೆ ಎಂದು ಸಂಸದೆ ಮತ್ತು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಪು ಕ್ಷೇತ್ರದ ಕೆಮೂರಿನಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಶ್ಮೀರದಲ್ಲಿನ ಸೇನೆಯ ಹಿಂದೆಗೆತ, ದೇಶದ್ರೋಹದ ಕಾನೂನು ರದ್ದು ಮಾಡುವುದು, ಸಶಸ್ತ್ರ ಪಡೆಗಳಿಗೆ ನೀಡಲಾಗಿದ್ದ ಅಧಿಕಾರದ ಕಡಿತವೇ ಮೊದಲಾದ ಅಪಾಯಕಾರಿ ಅಂಶಗಳಿರುವ ಕಾಂಗ್ರೆಸ್ ಪ್ರಣಾಳಿಕೆ ಈ ದೇಶದ ಸಮಗ್ರತೆಗೆ ನೀಡಿದ ಸವಾಲಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿನ ತನ್ನ ಐದು ವರ್ಷಗಳ ಅವಧಿಯಲ್ಲಿನ ಸಾಧನೆಗಳನ್ನು ಶೋಭಾ ಕರಂದ್ಲಾಜೆ ಅವರು ಪಕ್ಷದ ಕಾರ್ಯಕರ್ತರಿಗೆ ವಿವರಿಸಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಪಾದೆಬೆಟ್ಟು ಪ್ರಕಾಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಅಲೆವೂರು ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್ ನಾಯಕ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ್ ಬಾಬು, ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಗಣೇಶ್, ಜಿ.ಪಂ. ಸದಸ್ಯೆ ಗಿತಾಂಜಲಿ ಎಂ. ಸುವರ್ಣ, ಬಿಜೆಪಿಯ ಪ್ರಮುಖ ನಾಯಕರಾದ ಕೇಸರಿ ಯುವರಾಜ್, ಅಶೋಕ್, ಪ್ರವೀಣ್, ವಿಜಯ್ ಕೊಡವೂರು ಸಭೆಯನ್ನುದ್ದೇಶಿಸಿ ಮಾತನಾಡಿದರು.