ಹೊಸದಿಲ್ಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧೆ ನಡೆಸುವುದು ಅನುಮಾನ ಎನ್ನಲಾಗಿದೆ.
ಕಲಬುರಗಿಯಿಂದ ಈ ಹಿಂದೆ ಸಂಸದರಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರು ಸೋಲರಿಯದ ಸರದಾರ ಎಂದೇ ಹೆಸರಾದವರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಸೋಲನುಭವಿಸಿದ್ದರು. ಬಳಿಕ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಪಕ್ಷದ ಅಧ್ಯಕ್ಷರಾಗಿರುವ ಕಾರಣ ಕೇವಲ ತನ್ನ ಕ್ಷೇತ್ರದಲ್ಲಿ ಪ್ರಚಾರ ನಡೆಸದೆ ದೊಡ್ಡ ಮಟ್ಟದಲ್ಲಿ ದೇಶದೆಲ್ಲೆಡೆ ಪ್ರಚಾರ ನಡೆಸಬೇಕಾದ ಕಾರಣದಿಂದ ಖರ್ಗೆ ಅವರು ಚುನವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ವರದಿ ಹೇಳಿದೆ.
ಕಳೆದ ವಾರ ಕಲಬುರಗಿ ಕ್ಷೇತ್ರಕ್ಕೆ ಚರ್ಚಿಸಲಾದ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮಾತ್ರ ಇತ್ತು. ಆದರೆ ಅವರು ತಮ್ಮ ಅಳಿಯ ರಾಧಾಕೃಷ್ಣನ್ ದೊಡ್ಡಮನಿ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದೆ ಎಂದು ಅವರ ನಿಕಟ ಮೂಲಗಳನ್ನು ಉದ್ದೇಶಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಪಕ್ಷದ ವರಿಷ್ಠರು ಚುನಾವಣೆಗೆ ಸ್ಪರ್ಧಿಸದಿರುವ ದಾಖಲೆ ಕಾಂಗ್ರೆಸ್ ನಲ್ಲಿಲ್ಲ. ಇತ್ತೀಚಿನ ವರ್ಷಗಳಲ್ಲಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಸ್ಪರ್ಧಿಸಿದ್ದಾರೆ ಮತ್ತು ಗೆದ್ದಿದ್ದಾರೆ, ಆದರೆ ರಾಹುಲ್ ಗಾಂಧಿ ಅವರು 2019 ರಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲನುಭವಿಸಿದ್ದರು, ಆದರೆ ವಯನಾಡಿನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಮತ್ತೆ ವಯನಾಡಿನಲ್ಲಿ ರಾಹುಲ್ ಸ್ಪರ್ಧೆ ನಡೆಸಲಿದ್ದಾರೆ.