Advertisement

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

11:34 PM May 20, 2024 | Team Udayavani |

ಬೆಂಗಳೂರು: ವಿಧಾನಸಭೆಯಲ್ಲಿ 135 ಸ್ಥಾನ ಪಡೆದು ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರಕಾರಕ್ಕೆ ವಿಧಾನಪರಿಷತ್ತಿನಲ್ಲಿ ಸಂಖ್ಯಾ ಬಲವಿಲ್ಲ. ಇದರಿಂದ ಬಹುಮತದ ಅಗ್ನಿಪರೀಕ್ಷೆಯಲ್ಲಿ ಸಾಕಷ್ಟು ಬಾರಿ ಸೋಲು ಅನುಭವಿಸಿದೆ.

Advertisement

ಈಗ ಶಿಕ್ಷಕರು, ಪದವೀಧರರ ಕ್ಷೇತ್ರಗಳ 6 ಹಾಗೂ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಸೇರಿ ಒಟ್ಟು 17 ಸ್ಥಾನಗಳಿಗೆ ನಡೆಯಲಿರುವ ಚುನಾ ವಣೆಗಳಿಂದ ಕಾಂಗ್ರೆಸ್‌ ಸದಸ್ಯರ ಬಲ ಹೆಚ್ಚಾಗುವ ನಿರೀಕ್ಷೆ ಸರಕಾರದಲ್ಲಿದೆ.

ಒಟ್ಟು 75 ಸದಸ್ಯಬಲ ಹೊಂದಿರುವ ವಿಧಾನ ಪರಿಷತ್ತಿನಲ್ಲಿ ಬಹುಮತ ಸಾಬೀತುಪಡಿಸಲು ಕನಿಷ್ಠ 38 ಸ್ಥಾನಗಳಾದರೂ ಬೇಕು. ಆದರೆ ಆಡಳಿತಾರೂಢ ಕಾಂಗ್ರೆಸ್‌ ಬಳಿ 29 ಸದಸ್ಯಬಲವಿದ್ದು, ಇನ್ನೂ 9 ಸ್ಥಾನಗಳನ್ನು ಗಳಿಸಿಕೊಂಡರೆ ಬಹುಮತ ಸಿಗಲಿದೆ.

ಪ್ರಸ್ತುತ 35 ಸದಸ್ಯಬಲ ಹೊಂದಿದ್ದ ಬಿಜೆಪಿಗೆ ತೇಜಸ್ವಿನಿ ಗೌಡ, ಕೆ.ಪಿ. ನಂಜುಂಡಿ, ಆಯನೂರು ಮಂಜುನಾಥ್‌ ರಾಜೀನಾಮೆಯಿಂದ 3 ಸ್ಥಾನ ನಷ್ಟವಾಗಿ 32ಕ್ಕೆ ಇಳಿದಿದೆ. ಅದೇ ರೀತಿ ಮರಿತಿಬ್ಬೇಗೌಡ ರಾಜೀನಾಮೆಯಿಂದ ಜೆಡಿಎಸ್‌ ಸದಸ್ಯಬಲ ಏಳಕ್ಕೆ ಕುಸಿದಿದೆ. ಆದರೂ ಉಭಯ ಪಕ್ಷಗಳ ಸಂಖ್ಯೆ ಸೇರಿ 39 ಸ್ಥಾನ ಆಗುವುದರಿಂದ ಬಹುಮತದ ಅಂಚಿನಲ್ಲಿವೆ.

ಇದಲ್ಲದೆ ಜಗದೀಶ್‌ ಶೆಟ್ಟರ್‌ ಅವರ ರಾಜೀನಾಮೆಯಿಂದ ಕಾಂಗ್ರೆಸ್‌ಗೆ ಒಂದು ಸ್ಥಾನ ಕಡಿಮೆಯಾಗಿದ್ದು, ಪಕ್ಷೇತರರಾಗಿರುವ ಲಖನ್‌ ಜಾರಕಿಹೊಳಿ ಯಾರ ಪರ ಎಂಬುದು ಗೌಪ್ಯವಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಒಂದು ಮತವೂ ಪರಿಗಣನೆಗೆ ಒಳಗಾಗುತ್ತದೆ.
ಶಿಕ್ಷಕ ಹಾಗೂ ಪದವೀಧರರ 6 ಕ್ಷೇತ್ರಗಳ ಪೈಕಿ ಮೂರು ಬಿಜೆಪಿ, ಎರಡು ಜೆಡಿಎಸ್‌ ಹಾಗೂ ಒಂದು ಮಾತ್ರ ಕಾಂಗ್ರೆಸ್‌ ತೆಕ್ಕೆಯಲ್ಲಿತ್ತು. ಜೂ.3ರಂದು ನಡೆಯಲಿರುವ ಈ ಚುನಾವಣೆಯಲ್ಲಿ ಯಾರಿಗೆ ಹೆಚ್ಚು ಮತ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

ಜೂ.6ರಂದು ಇದರ ಫ‌ಲಿತಾಂಶ ಹೊರಬೀಳಲಿದ್ದು, ಒಂದಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ಕಾಂಗ್ರೆಸ್‌ ಲಾಭವೇ ಆಗಲಿದೆ.ಜೂ.13ರಂದು ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಪೈಕಿ ನಾಲ್ಕು ಕಾಂಗ್ರೆಸ್‌, ಐದು ಬಿಜೆಪಿ ಮತ್ತು ಒಂದು ಜೆಡಿಎಸ್‌ ಬತ್ತಳಿಕೆಯಲ್ಲಿದ್ದ ಸ್ಥಾನಗಳಾಗಿದ್ದವು. ವಿಧಾನಸಭೆಯಲ್ಲಿ 135 ಸ್ಥಾನ ಪಡೆದಿರುವ ಕಾಂಗ್ರೆಸ್‌ ಅನಾಯಾಸವಾಗಿ 7 ಸ್ಥಾನಗಳನ್ನು ಗೆಲ್ಲಲಿದ್ದು, ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಿಂದ ಕನಿಷ್ಠ ಎರಡು ಸ್ಥಾನ ಗೆದ್ದರೆ ಮೇಲ್ಮನೆಯಲ್ಲೂ ಕಾಂಗ್ರೆಸ್‌ ಪಾರುಪತ್ಯವೇ ಇರಲಿದೆ.

ಪ್ರಸ್ತುತ ಬಲಾಬಲ
ಬಿಜೆಪಿ 35
ಕಾಂಗ್ರೆಸ್‌ 29
ಜೆಡಿಎಸ್‌ 8
ಸಭಾಪತಿ 1
ಪಕ್ಷೇತರ 1
ಖಾಲಿ 1
ಒಟ್ಟು 75

ಎಲ್ಲಿ, ಎಷ್ಟು ಅಭ್ಯರ್ಥಿಗಳು?
ಈಶಾನ್ಯ ಪದವೀಧರ ಕ್ಷೇತ್ರ 19
ಬೆಂಗಳೂರು ಪದವೀಧರ ಕ್ಷೇತ್ರ 15
ನೈಋತ್ಯ ಪದವೀಧರ ಕ್ಷೇತ್ರ 10
ಆಗ್ನೇಯ ಶಿಕ್ಷಕರ ಕ್ಷೇತ್ರ 15
ದಕ್ಷಿಣ ಶಿಕ್ಷಕರ ಕ್ಷೇತ್ರ 11
ನೈಋತ್ಯ ಶಿಕ್ಷಕರ ಕ್ಷೇತ್ರ 8

Advertisement

Udayavani is now on Telegram. Click here to join our channel and stay updated with the latest news.

Next