Advertisement

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

01:21 AM Jun 15, 2024 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ರಾಜ್ಯ ಸರಕಾರವು ರಾಜಕೀಯ ಹಾಗೂ ವೈಯಕ್ತಿಕ ದ್ವೇಷದಿಂದ ಈ ಪ್ರಕರಣವನ್ನು ಕಾಣುತ್ತಿದ್ದು, ಬಿಎಸ್‌ವೈ ವಿರುದ್ಧ ಷಡ್ಯಂತ್ರ ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪೋಕ್ಸೋ ಪ್ರಕರಣ ಕುರಿತು ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಷಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಸಹಿತ ಬಿಜೆಪಿಯ ಹಲವು ನಾಯ ಕರು ಪ್ರತಿಕ್ರಿಯಿಸಿ, ರಾಜ್ಯ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

ಬಿಎಸ್‌ವೈ ಅವರಂಥ ಮುತ್ಸದ್ದಿಯ ತಂಟೆಗೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್‌ ನಿರ್ನಾಮವಾಗುವುದರಲ್ಲಿ ಸಂಶಯವೇ ಇಲ್ಲ ಎಂದು ವಿಪಕ್ಷ ನಾಯಕ ಅಶೋಕ್‌ ಕಿಡಿಕಾರಿದ್ದಾರೆ.

ಪೋಕ್ಸೋ ಪ್ರಕರಣ ರಾಜಕೀಯ ಪಿತೂರಿ ಆಗಿದ್ದು, ಷಡ್ಯಂತ್ರ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್‌ ಆದೇಶವನ್ನು ಬಿಜೆಪಿ ಸ್ವಾಗತಿಸುತ್ತದೆ. ಸರಕಾರ ತನ್ನ ಹುಳುಕು ಮುಚ್ಚಿಕೊಳ್ಳಲು ಈ ಕೆಲಸ ಮಾಡುತ್ತಿದೆ. ಬಿಎಸ್‌ವೈ ಅವರಿಗೆ ಕೆಟ್ಟ ಹೆಸರು ತರುವುದಕ್ಕಾಗಿಯೇ ಪ್ರಕರಣ ದಾಖಲಿಸಲಾಗಿದೆ ಎಂದು ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರ ಮೇಲೆ ಕರುನಾಡ ಜನರ ಆಶೀರ್ವಾದ, ಕೋಟಿ ಹೃದಯಗಳ ಪ್ರಾರ್ಥನೆ ನ್ಯಾಯ ದೇಗುಲದಲ್ಲಿ ಅನಾವರಣಗೊಂಡಿದೆ. ಷಡ್ಯಂತ್ರ, ಪಿತೂರಿ ರಾಜ ಕಾರಣ ಯಡಿಯೂರಪ್ಪ ಅವರನ್ನು ಹಿಂಬಾಲಿಸಿದೆ. ಆದರೆ ಎದೆಗುಂದದ ಅವರು ನ್ಯಾಯದ ಹಾದಿಯಲ್ಲಿ ಷಡ್ಯಂತ್ರಗಳನ್ನು ಜಯಿಸಿದ್ದಾರೆ. ಅವರಿಗೆ ನ್ಯಾಯಾಲಯವು ಮಧ್ಯಾಂತರ ಜಾಮೀನು ನೀಡಿದೆ. ನ್ಯಾಯ ದೇಗುಲದಲ್ಲಿ ಸತ್ಯವೇ ಗೆಲ್ಲುತ್ತದೆಂಬ ಅಚಲ ವಿಶ್ವಾಸ ನಮ್ಮದಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next