ಪುದುಚೇರಿ: ಮುಖ್ಯಮಂತ್ರಿ ನಾರಾಯಣಸ್ವಾಮಿ ನೇತೃತ್ವದ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಸೋಮವಾರ(ಫೆ.22, 2021) ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಂತಾಗಿದೆ. ಏತನ್ಮಧ್ಯೆ ನಾರಾಯಣ ಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಮಧ್ಯ ಪ್ರದೇಶದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ : ಆರೋಪಿಗಳಲ್ಲೊಬ್ಬ ಬಿಜೆಪಿ ಮುಖಂಡ..!
ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಇಬ್ಬರು ಶಾಸಕರು ಭಾನುವಾರ ರಾಜೀನಾಮೆ ಸಲ್ಲಿಸಿದ್ದರಿಂದ ಸದನದ ಬಲ 33ರಿಂದ 26ಕ್ಕೆ ಇಳಿದಿದ್ದು, ಕಾಂಗ್ರೆಸ್ ಬಲ 11ಕ್ಕೆ ಕುಸಿದಿದ್ದು, ವಿಪಕ್ಷಗಳ ಬಲ 14 ಆಗಿದೆ. ಆದರೂ ಮುಖ್ಯಮಂತ್ರಿ ನಾರಾಯಣ ಸ್ವಾಮಿ ತಮ್ಮ ಸರ್ಕಾರಕ್ಕೆ ಬಹುಮತ ಇರುವುದಾಗಿ ವಿಶ್ವಾಸವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಪುದುಚೇರಿಯ ರಾಜ್ಯಪಾಲ ಜವಾಬ್ದಾರಿ ವಹಿಸಿಕೊಂಡಿದ್ದ ತಮಿಳಿಸೈ ಸೌಂದರರಾಜನ್ ಸೋಮವಾರ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಿದ್ದರು. ಇಂದು ನಡೆದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದು, ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.
ನಾನು, ಸಚಿವರು, ಕಾಂಗ್ರೆಸ್, ಡಿಎಂಕೆ ಹಾಗೂ ಪಕ್ಷೇತರ ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಅದನ್ನು ಸ್ವೀಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ತಮ್ಮ ಸರ್ಕಾರ ಪತನವಾಗಲು ಮಾಜಿ ಗವರ್ನರ್ ಕಿರಣ್ ಬೇಡಿ ಅವರು ಕಾರಣ ಎಂದು ಸ್ವಾಮಿ ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.