Advertisement

ಕ್ಷೇತ್ರ ‘ಕೈ’ತಪ್ಪುವ ಬಗ್ಗೆ ಅಲ್ಪಸಂಖ್ಯಾತರಲ್ಲಿ ಆತಂಕ

06:48 AM Jan 14, 2019 | Harsha Rao |

ಬೆಂಗಳೂರು: ಲೋಕಸಭೆ ಚುನಾವಣೆಗೆ ಮೈತ್ರಿ ಪಕ್ಷ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಇನ್ನೂ ಗೊಂದಲ ಮುಂದುವರಿದಿರುವ ನಡುವೆಯೇ ಈ ಬಾರಿ ಅಲ್ಪ ಸಂಖ್ಯಾತ ಸಮುದಾಯದವರ ಅಪೇಕ್ಷಿತ ಕ್ಷೇತ್ರಗಳು ಕೈ ತಪ್ಪಲಿವೆಯೇ ಎಂಬ ಆತಂಕ ಮುಸ್ಲಿಂ ಸಮುದಾಯದ ನಾಯಕರಲ್ಲಿ ಶುರುವಾಗಿದೆ.

Advertisement

ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಗೆಲ್ಲಲು ಅವಕಾಶ ಇರುವ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕೆಂದು ಹೈಕಮಾಂಡ್‌ ನಾಯಕರಲ್ಲಿ ಮನವಿ ಮಾಡಲು ನಿರ್ಧರಿಸಿದ್ದಾರೆ. ಬೆಂಗಳೂರು ಕೇಂದ್ರ, ಧಾರವಾಡ, ಬೀದರ್‌ ಹಾಗೂ ಮಂಗಳೂರು ಕ್ಷೇತ್ರಗಳಲ್ಲಿ ಅಲ್ಪ ಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಲು ಇತ್ತೀಚೆಗೆ ನಡೆದ ಮುಸ್ಲಿಂ ಸಂಘಟನೆಗಳ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಎರಡೂ ಮಿತ್ರ ಪಕ್ಷಗಳು ಬೀದರ್‌ ಕ್ಷೇತ್ರ ತಮಗೇ ಬೇಕೆಂದು ಹಠ ಹಿಡಿದಿರುವ ನಡುವೆಯೇ ಅಲ್ಪ ಸಂಖ್ಯಾತ ಸಮುದಾಯಕ್ಕೆ ಕ್ಷೇತ್ರವನ್ನು ಬಿಟ್ಟುಕೊಡಬೇಕೆಂಬ ಬೇಡಿಕೆ ಇಡಲು ಮುಸ್ಲಿಂ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿದೆ. ಬೀದರ್‌ ಲೋಕಸಭಾ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ ಎನ್ನಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್‌ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧೆ ಮಾಡಿ ಸೋಲು ಕಂಡಿರುವುದರಿಂದ ಈ ಬಾರಿ ಹಾವೇರಿ ಕ್ಷೇತ್ರವನ್ನು ಅಲ್ಪ ಸಂಖ್ಯಾತ ಅಭ್ಯರ್ಥಿ ಬದಲಿಗೆ ಬೇರೆ ಸಮುದಾಯದವರಿಗೆ ನೀಡಬೇಕೆಂಬ ಬೇಡಿಕೆಯಿರುವುದರಿಂದ ಆ ಕ್ಷೇತ್ರ ಅಲ್ಪ ಸಂಖ್ಯಾತರ ಕೈ ತಪ್ಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅದರ ಬದಲು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಧಾರವಾಡ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡಬೇಕೆಂಬ ಬೇಡಿಕೆ ಇಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಮಾಜಿ ಸಂಸದರಾದ ಐ.ಜಿ. ಸನದಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಲ್ತಾಪ್‌ ಹುಳ್ಳೂರು ಈ ಕ್ಷೇತ್ರ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿಯೂ ಶೇ.35ರಷ್ಟು ಅಲ್ಪ ಸಂಖ್ಯಾತ ಸಮುದಾಯದ ಮತದಾರರಿದ್ದಾರೆ. ಆದರೆ, ದಕ್ಷಿಣ ಕನ್ನಡ ಭಾಗದಲ್ಲಿ ಬಿಜೆಪಿ ಚುನಾವಣೆ ತಂತ್ರವೇ ಬೇರೆಯಾಗಿದ್ದು, ಧರ್ಮದ ಆಧಾರದಲ್ಲಿ ಕರಾವಳಿ ಭಾಗದಲ್ಲಿ ಚುನಾವಣೆ ಎದುರಿಸುವುದರಿಂದ ಬಹುಸಂಖ್ಯಾತ ಹಿಂದುಗಳ ಸಹಕಾರ ಇಲ್ಲದೇ ಅಲ್ಪ ಸಂಖ್ಯಾತ ಅಭ್ಯರ್ಥಿಗಳು ಗೆಲುವು ಪಡೆಯುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಮಂಗಳೂರು ಲೋಕಸಭಾ ಕ್ಷೇತ್ರವನ್ನು ಅಲ್ಪ ಸಂಖ್ಯಾತರಿಗೆ ನೀಡಿದರೆ, ಕ್ರೈಸ್ತ ಸಮುದಾಯದಿಂದ ಮಾಜಿ ಶಾಸಕ ಜೆ.ಆರ್‌. ಲೋಬೊ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ ಎನ್ನಲಾಗಿದೆ.

Advertisement

ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಮತದಾರರು ಹೆಚ್ಚಿರುವ ಹಾಗೂ ಅಲ್ಪ ಸಂಖ್ಯಾತ ಸಮುದಾಯದ ಅಭ್ಯರ್ಥಿ ಗೆಲ್ಲಲು ಹೆಚ್ಚಿನ ಅವಕಾಶ ಇರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ದಕ್ಷಿಣ ಭಾರತದ ಚಿತ್ರನಟ ಪ್ರಕಾಶ್‌ ರೈ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವುದು ಕಾಂಗ್ರೆಸ್‌ನ ಅಲ್ಪ ಸಂಖ್ಯಾತ ಸಮುದಾಯದ ಮುಖಂಡರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ಸೆಂಟ್ರಲ್‌ ಕೇತ್ರದಲ್ಲಿ ಸ್ಪರ್ಧಿಸಲು ಈಗಾಗಲೇ ಅಲ್ಪ ಸಂಖ್ಯಾತ ಸಮುದಾಯದ ನಾಯಕರಾಗಿರುವ ಮಾಜಿ ಸಚಿವ ರೋಷನ್‌ ಬೇಗ್‌, ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್‌ ಸಾಕಷ್ಟು ಕಸರತ್ತು ಆರಂಭಿಸಿದ್ದಾರೆ. ಇನ್ನೊಂದೆಡೆ ಕ್ರೈಸ್ತ ಸಮುದಾಯದವರಿಗೆ ಅವಕಾಶ ನೀಡಬೇಕೆಂಬ ಒತ್ತಾಯವಿದ್ದು, ಮಾಜಿ ಸಂಸದ ಸಾಂಗ್ಲಿಯಾನ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಜತೆಗೂಡಿ ಕ್ಷೇತ್ರ ಹಂಚಿಕೆ ಮಾಡಿಕೊಳ್ಳಲು ಮುಂದಾಗಿರುವು ದರಿಂದ ರಾಜ್ಯದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಿರುವ ಬೆಂಗ ಳೂರು ಕೇಂದ್ರ, ಬೀದರ್‌, ಧಾರವಾಡ, ಮಂಗಳೂರು ಕ್ಷೇತ್ರ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ಅಲ್ಪ ಸಂಖ್ಯಾತ ಸಮುದಾಯದವರು ರಾಜ್ಯ ಕಾಂಗ್ರೆಸ್‌ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರನ್ನು ಶೀಘ್ರವೇ ಭೇಟಿ ಮಾಡಿ ಮನವಿ ಮಾಡಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

ಅಲ್ಪ ಸಂಖ್ಯಾತರು ಗೆಲ್ಲಲು ಅವಕಾಶವಿರುವ ಕ್ಷೇತ್ರಗಳನ್ನು ಬೇರೆಯವರಿಗೆ ಬಿಟ್ಟುಕೊಡುವುದು ಸರಿಯಲ್ಲ. ಬೆಂಗಳೂರು ಸೆಂಟ್ರಲ್‌ ಕ್ಷೇತ್ರ ಅಲ್ಪ ಸಂಖ್ಯಾತ ಸಮುದಾಯದವರಿಗೆ ಗೆಲ್ಲಲು ಹೆಚ್ಚಿನ ಅವಕಾಶವಿದೆ. ಹೀಗಾಗಿ ಈ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟು ಕೊಡುವುದು ಬೇಡ.

ಅಲ್ಪ ಸಂಖ್ಯಾತ ಸಮುದಾಯದವರಿಗೆ ಕಾಂಗ್ರೆಸ್‌ನಿಂದ ಕನಿಷ್ಠ ನಾಲ್ಕು ಸ್ಥಾನಗಳನ್ನು ನೀಡಬೇಕೆಂಬ ಬೇಡಿಕೆ ಇಡಲು ರಾಜ್ಯದ ಎಲ್ಲ ಮುಸ್ಲಿಂ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಿದ್ದೇವೆ. ಈ ಕುರಿತು ಕಾಂಗ್ರೆಸ್‌ ಮುಖಂಡರಿಗೆ ಮನವಿ ಮಾಡಲು ತೀರ್ಮಾನಿಸಿದ್ದೇವೆ. ಅಲ್ಪ ಸಂಖ್ಯಾತರು ಗೆಲ್ಲಲು ಅವಕಾಶ ಇರುವ ಕ್ಷೇತ್ರಗಳನ್ನು ಕಾಂಗ್ರೆಸ್‌ ಬೇರೆಯವರಿಗೆ ಬಿಟ್ಟು ಕೊಡಬಾರದು.

Advertisement

Udayavani is now on Telegram. Click here to join our channel and stay updated with the latest news.

Next