Advertisement
ಚಿಕ್ಕಮಗಳೂರು; ಬಾಕಿ ಕ್ಷೇತ್ರ: 04ಚಿಕ್ಕಮಗಳೂರು ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಹೀಗಾಗಿಯೇ ಟಿಕೆಟ್ ಅಂತಿಮವಾಗಿಲ್ಲ. ಅರ್ಜಿ ಸಲ್ಲಿಸಿದವರ ಜತೆಗೆ ಇತ್ತೀಚೆಗಷ್ಟೇ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿರುವ ಎಚ್.ಡಿ.ತಮ್ಮಯ್ಯ ರೇಸ್‌ನಲ್ಲಿದ್ದಾರೆ. ಆಕಾಂಕ್ಷಿಗಳಲ್ಲಿ ಕೆಲವರು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಕೆಲವರು ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಮೂಡಿಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವೆ ಡಾ|ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಅವರಿಗೆ ಬಹುತೇಕ ಟಿಕೆಟ್ ಎನ್ನಲಾಗುತ್ತಿದೆ. ಆದರೆ ನಯನಾ ಮೋಟಮ್ಮ ಅವರಿಗೆ ಟಿಕೆಟ್ ನೀಡಬಾರದು. ಹೊಸಮುಖಕ್ಕೆ ಟಿಕೆಟ್ ನೀಡಬೇಕೆಂಬ ಕೂಗು ಎದ್ದಿದೆ. ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ಎದುರಾಗಿದೆ. ಜಿ.ಎಚ್.ಶ್ರೀನಿವಾಸ್ ಹಾಗೂ ಗೋಪಿಕೃಷ್ಣ ನಡುವೆ ಪೈಪೋಟಿ ಇದ್ದು, ಬಣ ರಾಜಕೀಯದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಡೂರು ಕ್ಷೇತ್ರದಲ್ಲಿ ಕೆ.ಎಸ್.ಆನಂದ್ ಮತ್ತು ವೈಎಸ್‌ವಿ ದತ್ತ ನಡುವೆ ಪೈಪೋಟಿ ಏರ್ಪಟ್ಟಿದೆ. ವೈಎಸ್‌ವಿ ದತ್ತ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜತೆ ಅನ್ಯೋನ್ಯತೆ ಕಾಯ್ದುಕೊಂಡಿದ್ದು, ಇಲ್ಲಿಯೂ ಟಿಕೆಟ್ ಜಿಜ್ಞಾಸೆ ಇದೆ. ದತ್ತಗೆ ಟಿಕೆಟ್ ಕೊಟ್ಟರೆ ಬಂಡಾಯ ಏಳುವ ಸಾಧ್ಯತೆ ಇದೆ.
ಬಳ್ಳಾರಿ ನಗರ ಸಾಮಾನ್ಯ ಕ್ಷೇತ್ರದಲ್ಲಿ ಒಟ್ಟು 15 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಟಿಕೆಟ್ ಕೈತಪ್ಪುವುದು ಖಚಿತವಾದ ಬಹುತೇಕರು ಈಗಾಗಲೇ ಸೈಲೆಂಟ್ ಆಗಿದ್ದಾರೆ. ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಎಂ.ದಿವಾಕರ ಬಾಬು, ನಾರಾ ಭರತ್‌ರೆಡ್ಡಿ, ಅನಿಲ್‌ಲಾಡ್ ತೆರೆಮರೆಯ ಪ್ರಯತ್ನದಲ್ಲಿ ತೊಡಗಿದ್ದಾರೆ. ಸಿರುಗುಪ್ಪದಲ್ಲಿ ಮಾಜಿ ಶಾಸಕ ಬಿ.ಎಂ.ನಾಗರಾಜ್, ಪರಾಜಿತ ಅಭ್ಯರ್ಥಿ, ಶಾಸಕ ಬಿ.ನಾಗೇಂದ್ರ ಅಳಿಯ ಮುರಳಿಕೃಷ್ಣ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕೂಡ್ಲಿಗಿಯಲ್ಲಿ ಈ ಬಾರಿ ಮಾಜಿ ಶಾಸಕ ದಿ| ಎನ್.ಟಿ.ಬೊಮ್ಮಣ್ಣ ಅವರ ಪುತ್ರ ಡಾ|ಶ್ರೀನಿವಾಸ್, ಲೋಕೇಶ್ ನಾಯಕ, ನಾಗಮಣಿ ಜಿಂಕಲ್ ನಡುವೆ ಪೈಪೋಟಿ ಏರ್ಪಟ್ಟಿದೆ. ಹರಪನಹಳ್ಳಿಯಲ್ಲಿ ಮಾಜಿ ಡಿಸಿಎಂ ದಿ|ಎಂ.ಪಿ.ಪ್ರಕಾಶ್ ಪುತ್ರಿಯರಾದ ಎಂ.ಪಿ.ಲತಾ, ಎಂ.ಪಿ.ವೀಣಾ ಸಹಿತ 17 ಜನ ಆಕಾಂಕ್ಷಿಗಳಿದ್ದು, ಇಲ್ಲಿಯೂ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಬಂಡಾಯದ ಮುನ್ಸೂಚನೆಯಿಂದಾಗಿ ಟಿಕೆಟ್ ಘೋಷಣೆಯಾಗಿಲ್ಲ.
Related Articles
ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂದೇ ಹೇಳಲಾಗುತ್ತಿದ್ದ ಕೋಲಾರದಲ್ಲಿ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಕಡೇ ಕ್ಷಣದಲ್ಲಿ 2ನೇ ಕ್ಷೇತ್ರವಾಗಿ ಇವರಿಗೇ ಟಿಕೆಟ್ ಘೋಷಣೆಯಾದರೂ ಆಗಬಹುದು. ಇನ್ನು ಟಿಕೆಟ್‌ಗಾಗಿ ರಮೇಶ್‌ಕುಮಾರ್ ಬಣ ಮತ್ತು ಕೆ.ಎಚ್.ಮುನಿಯಪ್ಪ ಬಣ ಕಿತ್ತಾಡುತ್ತಿವೆ. ರಮೇಶ್‌ಕುಮಾರ್ ಬಣದ
Advertisement
ನೆಚ್ಚಿನ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಆಗಿದ್ದಾರೆ. ಹಾಗೆಯೇ ಕೆ.ಎಚ್.ಮುನಿಯಪ್ಪರ ನೆಚ್ಚಿನ ಅಭ್ಯರ್ಥಿಗಳ ದೊಡ್ಡ ಪಟ್ಟಿಯೇ ಇದೆ. ಈ ಪಟ್ಟಿಯಲ್ಲಿ ಬ್ಯಾಲಹಳ್ಳಿ ಗೋವಿಂದಗೌಡ, ಎ.ಶ್ರೀನಿವಾಸ್, ಸಿ.ಆರ್.ಮನೋಹರ್ ಪ್ರಮುಖರಾಗಿದ್ದಾರೆ. ಸಿದ್ದರಾಮಯ್ಯ ಅಲ್ಲದಿದ್ದರೇ ಇವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಹಾಗೆಯೇ ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯೂ ಮತ್ತಷ್ಟು ಕಗ್ಗಂಟಾಗಿದೆ. ಮೂಲಗಳ ಪ್ರಕಾರ ಕೊತ್ತೂರು ಮಂಜುನಾಥ್ ಸೂಚಿಸಿದ ಪರಿಶಿಷ್ಟ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಖಚಿತವೆನ್ನಲಾಗುತ್ತಿದೆ. ಇಲ್ಲೂ ಕೆ.ಎಚ್.ಮುನಿಯಪ್ಪ ಗುಂಪು ತಮ್ಮ ಬೆಂಬಲಿತ ಅಭ್ಯರ್ಥಿ ನಿಲ್ಲಿಸಲು ಪ್ರಯತ್ನಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಮ್ಮ ನೆಚ್ಚಿನ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಯಬಹುದು.
ದಕ್ಷಿಣ ಕನ್ನಡ ; ಬಾಕಿ ಕ್ಷೇತ್ರ: 3ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ’ಸೋಜಾ ನಡುವಿನ ಟಿಕೆಟ್ ಪೈಪೋಟಿ ಇದೆ. ಡಿ’ಸೋಜಾ ಸಿದ್ದರಾಮಯ್ಯ ಬಣದಲ್ಲಿದ್ದರೆ, ಲೋಬೋ ಬಣರಾಜಕೀಯದಿಂದ ದೂರವಿದ್ದಾರೆ. ಇವರ ಮಧ್ಯೆ, ಬಿಲ್ಲವ ಅಭ್ಯರ್ಥಿಗೆ ಸ್ಥಾನ ನೀಡಬೇಕು ಎಂಬ ಸ್ವರ ಇಲ್ಲಿ ಕೇಳಿಬರುತ್ತಿದ್ದು, ಬಿಲ್ಲವ ಮುಖಂಡ ಪದ್ಮರಾಜ್ ಅವರ ಹೆಸರು ಮುನ್ನೆಲೆಯಲ್ಲಿದೆ. ಮಂಗಳೂರು ಉತ್ತರದಲ್ಲಿ ಸಿದ್ದರಾಮಯ್ಯ ಬಣದ ಅಭ್ಯರ್ಥಿ, ಮಾಜಿ ಶಾಸಕ ಮೊದಿನ್ ಬಾವ ಹಾಗೂ ಡಿ.ಕೆ. ಶಿವಕುಮಾರ್ ಬಣದ ಹೊಸ ಅಭ್ಯರ್ಥಿ ಇನಾಯತ್ ಅಲಿ ನಡುವಿನ ಟಿಕೆಟ್ ಪೈಪೋಟಿ ಇಲ್ಲಿ ಮುಸುಕಿನ ಗುದ್ದಾಟವನ್ನೇ ಸೃಷ್ಟಿಸಿದೆ. ಹೀಗಾಗಿ ಟಿಕೆಟ್ ಘೋಷಣೆಯಾಗಿಲ್ಲ. ಪುತ್ತೂರು ಕ್ಷೇತ್ರದಲ್ಲಿ 15 ಮಂದಿ ಆಕಾಂಕ್ಷಿಗಳಿದ್ದಾರೆ. ಮುಖ್ಯವಾಗಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಬಲ ಆಕಾಂಕ್ಷಿಯಾಗಿದ್ದು, ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರ ಪರೋಕ್ಷ ಬೆಂಬಲವಿದೆ. ಇನ್ನೊಂದೆಡೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರಬಲ ಆಕಾಂಕ್ಷಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂಲಕ ಟಿಕೆಟ್‌ಗೆ ಪ್ರಯತ್ನ ಮುಂದುವರಿಸಿದ್ದಾರೆ. ಇವರಿಬ್ಬರ ಹೆಸರಿಗೂ ಸ್ಥಳೀಯ ಮುಖಂಡರ ವಿರೋಧವಿದೆ. ಒಕ್ಕಲಿಗ ಸಮುದಾಯ ಕೂಡ ಟಿಕೆಟ್ ಕೇಳಿದ್ದು. ಧನಂಜಯ ಅಡ³ಂಗಾಯ, ಭರತ್ ಮುಂಡೋಡಿ ರೇಸ್‌ನಲ್ಲಿದ್ದಾರೆ. ಬೀದರ ; ಬಾಕಿ ಕ್ಷೇತ್ರ: 2
ಔರಾದ ಮೀಸಲು ಕ್ಷೇತ್ರದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ, ಸಿದ್ದರಾಮಯ್ಯ ಆಪ್ತ ಭೀಮಸೇನ್ ಶಿಂಧೆ, ಡಾ|ಲಕ್ಷ ¾ಣ ಸೊರಳ್ಳಿಕರ್ ನಡುವೆ ಟಿಕೆಟ್‌ಗಾಗಿ ಫೈಟ್ ನಡೆಯುತ್ತಿದೆ. ಪ್ರಬಲ ಆಕಾಂಕ್ಷಿಗಳಾಗಿರುವ ಸಿಂಧೆ ಬಲಗೈ ಮತ್ತು ಡಾ| ಲಕ್ಷ ¾ ಣ ಸೊರಳ್ಳಿಕರ್ ಎಡಗೈ ಪಂಗಡಕ್ಕೆ ಸೇರಿದ್ದಾರೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಮಾಜಿ ಸಿಎಂ ದಿ|ಧರಂಸಿಂಗ್ ಪುತ್ರ, ಮಾಜಿ ಎಂಎಲ್‌ಸಿ ವಿಜಯಸಿಂಗ್ ಹಾಗೂ ಕಳೆದ ಬಾರಿ ಪರಾಜಿತ ಅಭ್ಯರ್ಥಿ ಮಾಲಾ ನಾರಾಯಣರಾವ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ವಿಜಯಸಿಂಗ್‌ಗೆ ಟಿಕೆಟ್ ಫೈನಲ್ ಎಂಬ ಮಾತುಗಳು ಕೇಳಿ ಬರುತ್ತಿದೆಯಾದರೂ ಕೊನೆ ಹಂತದಲ್ಲಿ ಯಾವುದೇ ಬದಲಾವಣೆ ನಡೆದರೂ ಆಶ್ಚರ್ಯ ಪಡಬೇಕಿಲ್ಲ. ರಾಯಚೂರು; ಬಾಕಿ ಕ್ಷೇತ್ರ: 5
ಮಾನ್ವಿ ಕ್ಷೇತ್ರದಲ್ಲಿ ಮಾಜಿ ಶಾಸಕ ಹಂಪಯ್ಯ ನಾಯಕ ಮತ್ತೂಮ್ಮೆ ಟಿಕೆಟ್ ಬಯಸುತ್ತಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಕೂಡ ಆಕಾಂಕ್ಷಿಯಾಗಿದ್ದಾರೆ. ರಾಯಚೂರು ನಗರದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಅದರಲ್ಲೂ 13 ಅಲ್ಪಸಂಖ್ಯಾಕರೇ ಇದ್ದಾರೆ. ಹೀಗಾಗಿ ನಮಗೇ ಕೊಡಿ ಎನ್ನುತ್ತಿದ್ದಾರೆ. ಮಾಜಿ ಎಂಎಲ್‌ಸಿ ಎನ್.ಎಸ್.ಬೋಸರಾಜ್ ಈ ಬಾರಿಯೂ ಆಕಾಂಕ್ಷಿಯಾಗಿದ್ದಾರೆ. ಸಿಂಧನೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಪ್ರಬಲ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಜತೆಗೆ ಕಾಂಗ್ರೆಸ್ ಯುವ ಘಟಕದ ಮಾಜಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ಮುಖಂಡ ಕೆ.ಕರಿಯಪ್ಪ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹಂಪನಗೌಡ ನಾಲ್ಕು ಬಾರಿ ಶಾಸಕರಾಗಿದ್ದು, ಈ ಬಾರಿ ಹೊಸಬರಿಗೆ ಅವಕಾಶ ನೀಡಬೇಕೆನ್ನುವ ಕೂಗಿದೆ. ಟಿಕೆಟ್ ಕೈ ತಪ್ಪಿದರೆ ಕೆ.ಕರಿಯಪ್ಪ ಬಿಜೆಪಿಯತ್ತ ಮುಖ ಮಾಡುವ ಸಾಧ್ಯತೆಗಳಿದ್ದು, ಭಿನ್ನಮತದ ಭೀತಿ ಇದೆ. ಲಿಂಗಸುಗೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಎಸ್.ಹೂಲಿಗೇರಿ ಹೆಸರು ಮೊದಲ ಪಟ್ಟಿಯಲ್ಲಿ ಬಂದಿಲ್ಲ. ರುದ್ರಯ್ಯ, ಎಚ್.ಬಿ. ಮುರಾರಿ ಎಂಬುವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಮುಖಂಡರ ಒಳಜಗಳಗಳಿಂದ ಅಲ್ಲಿ ಟಿಕೆಟ್ ಅಂತಿಮಗೊಂಡಿಲ್ಲ ಎನ್ನಲಾಗುತ್ತಿದೆ. ದೇವದುರ್ಗದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ ಅವರ ಸೊಸೆ ಶ್ರೀದೇವಿ ನಾಯಕ ಸಾಕಷ್ಟು ಸಂಚಾರ ಮಾಡುತ್ತಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿ.ವಿ.ನಾಯಕರಿಗೇ ಟಿಕೆಟ್ ನೀಡಬೇಕು ಎನ್ನುವ ಒತ್ತಾಯಗಳಿವೆ. ತುಮಕೂರು ; ಬಾಕಿ ಕ್ಷೇತ್ರ: 03
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್, ಶಶಿಹುಲಿಕುಂಟೆ ಮs…, ಎಚ್.ಸಿ.ಹನುಮಂತಯ್ಯ, ಯಕ್ಬಾಲ್ ಅಹಮದ್, ಅತೀಕ್ ಅಹಮದ್, ಡಾ| ಫಹಾØನ ಬೇಗಂ, ಲಾಯರ್ ಬಾಬು, ಜತೆಗೆ ಅಟಿಕಾ ಬಾಬು ಪೈಪೋಟಿಯಲ್ಲಿದ್ದಾರೆ. ಸಂಖ್ಯೆ ಹೆಚ್ಚಿರುವುದರಿಂದ ಬಂಡಾಯದ ಆಲೋಚನೆಯಲ್ಲಿ ಟಿಕೆಟ್ ಘೋಷಣೆ ಮಾಡಿಲ್ಲ. ಇನ್ನು ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಹೆಚ್.ನಿಂಗಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಪ್ರಚಾರ ನಡೆಸುತ್ತಿದ್ದಾರೆ. ಗುಬ್ಬಿ ವಿಧಾನ ಸಭಾ ಕ್ಷೇತ್ರದದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್ .ಶ್ರೀನಿವಾಸ್ ಜೆಡಿಎಸ್ ತೊರೆದಿದ್ದು, ಕಾಂಗ್ರೆಸ್ ಪಕ್ಷ ಸೇರುವ ಹಿನ್ನಲೆಯಲ್ಲಿ ಅವರಿಗೇ ಟಿಕೇಟ್ ನೀಡಲು ನಿರ್ಧಾರ ಮಾಡಿರುವುದರಿಂದ ಅಲ್ಲಿಯೂ ಟಿಕೇಟ್ ಘೋಷಣೆ ಮಾಡಿಲ್ಲ. ಬೆಂಗಳೂರು ; ಬಾಕಿ ಕ್ಷೇತ್ರ: 10
ರಾಜ್ಯದಲ್ಲಿ ಮರಳಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿರುವ ಕಾಂಗ್ರೆಸ್‌ಗೆ ರಾಜಧಾನಿ ಬೆಂಗಳೂರಿನಲ್ಲೇ ಅಭ್ಯರ್ಥಿಗಳ ಬರ ಎದುರಾಗಿದೆ. ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿಲ್ಲ. ಈ ಕ್ಷೇತ್ರದಲ್ಲಿ ಅಖಂಡ ಶ್ರೀನಿವಾಸ್‌ಮೂರ್ತಿ ವಿರುದ್ಧ ಆಡಳಿತ ವಿರೋಧಿ ಅಲೆಯ ಜತೆಗೆ ಮೂವರು ಆಕಾಂಕ್ಷಿಗಳಿದ್ದಾರೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಚಿಕ್ಕಪೇಟೆ, ಪದ್ಮನಾಭನಗರ, ದಾಸರಹಳ್ಳಿ, ಸಿ.ವಿ.ರಾಮನ್ ನಗರ, ಪುಲಕೇಶಿನಗರ, ಯಶವಂತಪುರ, ಯಲಹಂಕ, ಕೆ.ಆರ್.ಪುರ, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಸೂಕ್ತ ಅಭ್ಯರ್ಥಿ ಕೊರತೆ ಇದೆ. ಕಳೆದ ಬಾರಿ ಟಿಕೆಟ್ ಪಡೆದವರಿಗೆ ಈ ಬಾರಿಯೂ ಗೆಲ್ಲುವ ವಿಶ್ವಾಸವಿಲ್ಲ. ಹೀಗಾಗಿ ಈ ಕ್ಷೇತ್ರಗಳಲ್ಲಿ ಲೆಕ್ಕಾಚಾರದ ಹೆಜ್ಜೆ ಇಡಲು ನಿರ್ಧರಿಸಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸಚಿವ ಸೋಮಶೇಖರ್‌ಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಎಂಜಿನಿಯರ್ ಹಾಗೂ ಸಿದ್ದರಾಮಯ್ಯ ಆಪ್ತ ಚಿಕ್ಕರಾಯಪ್ಪ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆ.ಆರ್. ಪುರಕ್ಕೆ ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿಯವರನ್ನು ಕರೆತರುವ ಪ್ರಯತ್ನ ಇನ್ನೂ ಕೈಗೂಡಿಲ್ಲ. ದಾಸರಹಳ್ಳಿಯಲ್ಲೂ ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿ ಸಿಕ್ಕಿಲ್ಲ. ಕಂದಾಯ ಸಚಿವ ಆರ್.ಅಶೋಕ ವಿರುದ್ಧ ಯಾರನ್ನೂ ಕಣಕ್ಕೆ ಇಳಿಸಬೇಕೆಂಬ ಚರ್ಚೆಯೇ ಇನ್ನೂ ನಡೆದಿಲ್ಲ. ಚಿಕ್ಕಪೇಟೆಯಿಂದ ಆರ್.ವಿ.ದೇವರಾಜ್ ಹಾಗೂ ನಾಗಾಂಬಿಕೆ ಆಕಾಂಕ್ಷಿಗಳಾಗಿದ್ದಾರೆ. ಯಲಹಂಕ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಅವರನ್ನು ಬದಲಾಯಿಸುವ ಬಗ್ಗೆ ಕೆಪಿಸಿಸಿ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೊಪ್ಪಳ; ಬಾಕಿ ಕ್ಷೇತ್ರ: 01
ಗಂಗಾವತಿ ಕ್ಷೇತ್ರದಲ್ಲಿ ಮೂಲ-ವಲಸಿಗ ಕಾಂಗ್ರೆಸ್ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆಯಾದರೂ ಆಂತರಿಕ ಭಿನ್ನಾಭಿಪ್ರಾಯ ರಾಜಕೀಯದಲ್ಲೂ ಬಿಸಿ ತುಪ್ಪವಾಗಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಎಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಅವರು ಟಿಕೆಟ್‌ಗೆ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಅನ್ಸಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನೆಲುಬಾಗಿದ್ದರೆ, ಮಲ್ಲಿಕಾರ್ಜುನ ನಾಗಪ್ಪ, ಎಚ್.ಆರ್.ಶ್ರೀನಾಥ ಅವರಿಗೆ ಡಿಕೆಶಿ, ಬಿ.ಕೆ.ಹರಿಪ್ರಸಾದ್ ಸಹಿತ ಕೆಲವು ಹೈಕಮಾಂಡ್ ಮಟ್ಟದಲ್ಲಿನ ಮೂಲ ಕಾಂಗ್ರೆಸ್ ನಾಯಕರ ಕೃಪೆಯಿದೆ. ಹಾಸನ ; ಬಾಕಿ ಕ್ಷೇತ್ರ: 05
ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಲ್ಲಿ ಎಂ.ಟಿ.ಕೃಷ್ಣೇಗೌಡ ಮತ್ತು ಶ್ರೀಧರಗೌಡ ಅವರ ನಡುವೆ ಪೈಪೋಟಿ ಇತ್ತು. ಆದರೆ ಈಗ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅವರನ್ನು ಸೆಳೆದು ಸ್ಪರ್ಧೆಗಿಳಿಸಲು ಕಾಂಗ್ರೆಸ್ ಮುಖಂಡರು ಎದುರು ನೋಡುತ್ತಿದ್ದಾರೆ. ಹಾಸನ ಕ್ಷೇತ್ರದಲ್ಲಿ ಬಿ.ಪಿ.ಮಂಜೇಗೌಡ ಮತ್ತು ಬನವಾಸೆ ರಂಗಸ್ವಾಮಿ ನಡುವೆ ಟಿಕೆಟ್‌ಗೆ ಪೈಪೋಟಿಯಿದ್ದರೂ, ರಂಗಸ್ವಾಮಿ ಅವರಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ. ಬೇಲೂರು ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಶಿವರಾಮು ಮತ್ತು ಮಾಜಿ ಶಾಸಕ ದಿ.ರುದ್ರೇಶಗೌಡ ಅವರ ನಡುವೆ ಟಿಕೆಟ್‌ಗೆ ಪೈಪೋಟಿ ಇತ್ತು. ಕೆಲವು ದಿನಗಳ ಬಂದೆ ಪಕ್ಷ ಸೇರಿದ ಗ್ರಾನೈಟ್ ರಾಜಶೇಖರ್ ಅವರೂ ಆಕಾಂಕ್ಷಿಯಾಗಿದ್ದು, ಅಂತಿಮವಾಗಿ ಬಿ.ಶಿವರಾಮು ಅವರಿಗೆ ಟಿಕೆಟ್ ಘೋಷಣೆ ಆಗಬಹುದು. ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ತೊರೆಯುತ್ತಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಖಾತರಿಯಾದಂತಿದ್ದು, ಘೋಷಣೆಯೊಂದೇ ಬಾಕಿ ಉಳಿದಿದೆ. ಶ್ರವಣಬೆಳಗೊಳ ಕ್ಷೇತ್ರದ ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ ಹಾಗೂ ಜತ್ತೇನಹಳ್ಳಿ ರಾಮಚಂದ್ರ ಅವರ ನಡುವೆ ಪೈಪೋಟಿ ಎದುರಾಗಿದ್ದು, ಯಾರಿಗೆ ಟಿಕೆಟ್ ಘೋಷಣೆಯಾದೀತು ಎಂಬ ಕುತೂಹಲವಿದೆ. ಧಾರವಾಡ; ಬಾಕಿ ಕ್ಷೇತ್ರ: 06
ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರತಿನಿಧಿಸುತ್ತಿರುವ ಹು-ಧಾ ಸೆಂಟ್ರಲ್‌ನಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬುದು ಒಂದು ಕಡೆಯಾದರೆ, ನನಗೇ ಸಿಗುವುದು ಖಚಿತ ಎಂಬ ಪ್ರಚಾರ ಮತ್ತೂಂದು ಕಡೆಯಾಗಿದೆ. ಕ್ಷೇತ್ರದಲ್ಲಿ ಸದ್ಯ ಅನಿಲ್‌ಕುಮಾರ ಪಾಟೀಲ ಮತ್ತು ರಜತ ಉಳ್ಳಾಗಡ್ಡಿಮಠ ನಡುವೆ ತೀವ್ರ ಪೈಪೋಟಿ ಇದೆ. ಮುಸ್ಲಿಮರು ಸಹ ಅಲ್ಪಸಂಖ್ಯಾಕ ಖೋಟಾದಲ್ಲಿ ಟಿಕೆಟ್‌ಗೆ ಒತ್ತಾಯಿಸುತ್ತಿದ್ದಾರೆ. ಇನ್ನು ಹು-ಧಾ ಪಶ್ಚಿಮದಲ್ಲಿ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಆಗಮನದಿಂದ ಟಿಕೆಟ್ ಪೈಪೋಟಿ ಹೆಚ್ಚಿದೆ. ದೀಪಾ ಗೌರಿ, ದೀಪಕ್ ಚಿಂಚೋರೆ, ರಾಜು ಪಾಟೀಲ, ಮೋಹನ ಪಿ.ಎಚ್.ನೀರಲಕೇರಿ ಅವರೂ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ಪಡುತ್ತಿದ್ದಾರೆ. ವರಿಷ್ಠರು ಲಿಂಬಿಕಾಯಿ ಅವರ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ. ಧಾರವಾಡ ಗ್ರಾಮೀಣದಲ್ಲಿ ವಿನಯ್ ಕುಲಕರ್ಣಿ ಅಭ್ಯರ್ಥಿಯಾಗಿದ್ದರೂ ಕೆಲ ಮೂಲಗಳ ಪ್ರಕಾರ ಈ ಬಾರಿ ಅವರ ಪತ್ನಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರ ಇದೆ ಎಂದು ಹೇಳಲಾಗುತ್ತಿದೆ. ವಿನಯ್ ಕುಲಕರ್ಣಿ ಶಿಗ್ಗಾವಿಗೆ ಹೋಗುವ ಸಾಧ್ಯತೆ ಇರುವುದರಿಂದ ಟಿಕೆಟ್ ಘೋಷಣೆ ತಡವಾಗಿದೆ ಎನ್ನಲಾಗುತ್ತಿದೆ. ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿಲ್ಲ. ಕುಸುಮಾವತಿ ಅವರನ್ನು ಬಿಟ್ಟರೆ ಮಾಜಿ ಶಾಸಕ ಎಂ.ಎಸ್.ಅಕ್ಕಿ, ಚಂದ್ರಶೇಖರ ಜುಟ್ಟಲ, ಉಮೇಶ ಹೆಬಸೂರ, ಅರವಿಂದ ಕಟಗಿ ಸಹಿತ ಹಲವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ದಿ| ಸಿ.ಎಸ್. ಶಿವಳ್ಳಿ ಕುಟುಂಬಕ್ಕೇ ಕೊಡಬೇಕೋ ಅಥವಾ ಶಾಸಕಿ ಕುಸುಮಾವತಿ ಶಿವಳ್ಳಿ ಒಲವು ತೋರುವ ವ್ಯಕ್ತಿಗೆ ಟಿಕೆಟ್ ನೀಡಬೇಕೊ ಎಂಬ ಒಳಗೊಂದಲವಿದೆ. ನವಲಗುಂದದಲ್ಲಿ ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸಿಗರು ಎಂಬ ತಿಕ್ಕಾಟ ಶುರುವಾಗಿದೆ. ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಆಗಮಿಸಿರುವ ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ ತಾವೇ ಅಭ್ಯರ್ಥಿಯಾಗಲು ಸಾಕಷ್ಟು ಸರ್ಕಸ್ ನಡೆಸುತ್ತಿದ್ದಾರೆ. ಉಳಿದಂತೆ ವಿನೋದ ಅಸೂಟಿ, ಮಾಜಿ ಸಚಿವ ಕೆ.ಎನ್. ಗಡ್ಡಿ, ಶಿವಾನಂದ ಕರಿಗಾರ ಮೊದಲಾದವರು ತೀವ್ರ ಪೈಪೋಟಿಯಲ್ಲಿದ್ದಾರೆ. ಕಲಘಟಗಿಯಲ್ಲಿ ಟಿಕೆಟ್‌ಗಾಗಿ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ, ಅಸಮಾಧಾನ ಹೆಚ್ಚಶವಾಗುವ ಹಿನ್ನೆಲೆಯಲ್ಲಿ ಟಿಕೆಟ್ ಘೋಷಣೆಯಾಗಿಲ್ಲ.