ಹೊಸದಿಲ್ಲಿ: ಇತ್ತೀಚಿನ ಪಂಚರಾಜ್ಯ ಚುನಾವಣೆಯ ಸೋಲಿನಿಂದ ಕಾಂಗ್ರೆಸ್ ಅಮೂಲ್ಯವಾದ ಪಾಠ ಕಲಿತಿದೆ. 2024ರ ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಸಂಪೂರ್ಣ ಗಮನಹರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(CWC) ಸಭೆಯಲ್ಲಿ ಮಾತನಾಡಿದ ಅವರು, “ಮಾಡಿರುವ ತಪ್ಪುಗಳನ್ನು ಪುನರಾವರ್ತಿಸದಿರಲು ಕಾಂಗ್ರೆಸ್ ಬದ್ಧವಾಗಿದೆ’ ಎಂದರು.
“ತೆಲಂಗಾಣ ಹೊರತುಪಡಿಸಿ, ಉಳಿದ ರಾಜ್ಯಗಳ ಫಲಿತಾಂಶವು ನಮಗೆ ನಿರಾಶದಾಯಕವಾಗಿದೆ. ಫಲಿತಾಂಶಗಳ ಪ್ರಾಥಮಿಕ ವಿಶ್ಲೇಷಣೆಯನ್ನು ಹಾಗೂ ಸೋಲಿನ ಕಾರಣಗಳನ್ನು ಕಾಂಗ್ರೆಸ್ ಗುರುತಿಸಿದೆ. ಫಲಿತಾಂಶದ ಹೊರತಾಗಿಯೂ, ಈ ರಾಜ್ಯಗಳಲ್ಲಿ ಮತ ಹಂಚಿಕೆಯಲ್ಲಿ ಪಕ್ಷಕ್ಕೆ ಸಕಾರಾತ್ಮಕ ಸಂಕೇತಗಳು ಕಂಡಿವೆ. ಸರಿಯಾಗಿ ಗಮನಹರಿಸಿದರೆ, ಫಲಿತಾಂಶ ನಮ್ಮ ಕಡೆ ತಿರುಗು ವಂತೆ ಮಾಡಬಹುದು ಎಂಬ ನಿರ್ದಿಷ್ಟ ಭರವಸೆ ಯನ್ನು ಇದು ನೀಡುತ್ತದೆ’ ಎಂದು ಕಾಂಗ್ರೆಸ್ ಅಧ್ಯಕ್ಷರು ಆಶಾಭಾವನೆ ವ್ಯಕ್ತಪಡಿಸಿದರು.
ಇದೇ ವೇಳೆ, “ಪೂರ್ವದಿಂದ ಪಶ್ಚಿಮಕ್ಕೆ ರಾಹುಲ್ ಗಾಂಧಿ ಅವರು ಮತ್ತೂಂದು ಭಾರತ್ ಜೋಡೋ ಯಾತ್ರೆ ಕೈಗೊಳ್ಳಲು ಅನೇಕ ನಾಯಕರು ಆಗ್ರಹಿಸಿದ್ದಾರೆ. ಆದರೆ ಇದರ ಅಂತಿಮ ನಿರ್ಧಾರವು ರಾಹುಲ್ ಹಾಗೂ ಸಿಡಬ್ಲ್ಯುಸಿಗೆ ಬಿಟ್ಟಿದ್ದು’ ಎಂದರು. ಮುಂಬರುವ ಲೋಕಸಭೆ ಚುನಾವಣೆಗಾಗಿ ಪಕ್ಷವನ್ನು ಸಂಘಟಿಸಿ ಎಂದು ಕಾರ್ಯ ಕರ್ತರಿಗೆ ಹೇಳಿದರು.
ಸಾಂವಿಧಾನಿಕ ಕರ್ತವ್ಯ ನಿಭಾಯಿಸುವಲ್ಲಿ ವಿಫಲ: “ಸಂಸದರನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರು ತಮ್ಮ ಸಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ’ ಎಂದ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಉಭಯ ಸದನಗಳಲ್ಲಿ ವಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿದ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಸಭಾಪತಿ ವಿರುದ್ಧ ಖರ್ಗೆ ಈ ರೀತಿ ಕಿಡಿಕಾರಿದರು.