ಬೆಂಗಳೂರು: ಜೂನ್ 2ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಮೇಲ್ಮನೆ ಚುನಾವಣೆ ಸಹಿತ ಹಲವು ವಿಷಯಗಳು ಸಭೆಯಾಗಲಿವೆ.
ವಿಧಾನಸಭೆ ಸಂಖ್ಯಾಬಲದ ಆಧಾರದಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನ. ಅದರ ಹಿಂದಿನ ದಿನವೇ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಮುಖ್ಯವಾಗಿ ನಾಮಪತ್ರ ಸಲ್ಲಿಕೆಗೆ ಅಗತ್ಯವಿರುವ ಶಾಸಕರ ಸಹಿ ಮತ್ತಿತರ ಪ್ರಕ್ರಿಯೆಗಳಿಗೆ ಸಂಬಂಧಿಸಿ ಅಂದು ಸೂಚನೆ ನೀಡಲಾಗುವುದು. ಜತೆಗೆ ಜೂನ್ 3ರಂದು ಮೂರು ಶಿಕ್ಷಕರು ಮತ್ತು ಮೂರು ಪದವೀಧರರ ಕ್ಷೇತ್ರಗಳಿಂದ ಮೇಲ್ಮನೆಗೆ ನಡೆಯಲಿರುವ ಚುನಾವಣೆಯ ಪ್ರಚಾರ, ಅಂತಿಮ ಸಿದ್ಧತೆಗಳ ಕುರಿತೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2ರಂದು ಸಂಜೆ 6 ಗಂಟೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ. ಪಕ್ಷದ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಸಂಸದರು ಮತ್ತಿತರರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ಜಂಟಿ ಅಧಿವೇಶನ ಮತ್ತು ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಹೆಚ್ಚು-ಕಡಿಮೆ ಮೂರು ತಿಂಗಳ ಬಳಿಕ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವ ವಹಿಸಲಿದ್ದಾರೆ.
ಪದಾಧಿಕಾರಿಗಳ ಸಭೆ ಮುಂದೂಡಿಕೆ
ಈ ಮಧ್ಯೆ ಜೂನ್ 1ರಂದು ಕರೆಯಲಾಗಿದ್ದ ಪಕ್ಷದ ಪದಾಧಿಕಾರಿಗಳ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಡಿಕೆಶಿ ತಿಳಿಸಿದರು.