Advertisement

ಕಾಂಗ್ರೆಸ್‌ ಶಾಸಕರು ಮಾರಾಟಕ್ಕಿಲ್ಲ: ಉಪ ಮುಖ್ಯಮಂತ್ರಿ ಪರಮೇಶ್ವರ್‌

06:15 AM May 25, 2018 | |

ಬೆಂಗಳೂರು: ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸಲಿದ್ದು, ಕಾಂಗ್ರೆಸ್‌ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ. ಬಿಜೆಪಿಯವರು ಎಷ್ಟೇ ಹಣದ ಆಮಿಷ ಒಡ್ಡಿದರೂ ನಮ್ಮ ಶಾಸಕರು ಮಾರಾಟಕ್ಕಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡುತ್ತಿದೆ. ಆದರೆ, ಕಾಂಗ್ರೆಸ್‌ ಶಾಸಕರು ಅವರ ಆಮಿಷಗಳಿಗೆ ಬಲಿಯಾಗುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇರವಾಗಿಯೇ ಕುದುರೆ ವ್ಯಾಪಾರಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

ಸಮ್ಮಿಶ್ರ ಸರ್ಕಾರ ರಚನೆಗೆ ಸಂವಿಧಾನದಲ್ಲಿ ಅವಕಾಶ ಇದೆ. ದೇಶದಲ್ಲಿ ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಲು, ಜೆಡಿಎಸ್‌ ಜೊತೆ ಕೈ ಜೋಡಿಸಲಾಗಿದೆ. ಬಿಜೆಪಿ ದುರಾಡಳಿತಕ್ಕೆ ಕರ್ನಾಟಕದಿಂದಲೇ ತಡೆಯೊಡ್ಡಲು ಕಾಂಗ್ರೆಸ್‌ ಹೈ ಕಮಾಂಡ್‌ ಈ ತೀರ್ಮಾನ ಮಾಡಿದ್ದು, ಜೆಡಿಎಸ್‌ ಜೊತೆಗೆ ಯಾವುದೇ ಅಧಿಕಾರ ಅವಧಿ ಹಂಚಿಕೆಯ ಸೂತ್ರ ಮಾಡಿಕೊಂಡಿಲ್ಲ ಎಂದು ಹೇಳಿದರು.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿ ನೀಡಿರುವ ಘೋಷಣೆಗಳ ಬಗ್ಗೆ ಸಮನ್ವಯ ಸಮಿತಿ ರಚನೆ ಮಾಡಿ, ಎರಡೂ ಪಕ್ಷದ ನಾಯಕರು ಚರ್ಚಿಸಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ. ಸದನದಲ್ಲಿ ಬಹುಮತ ಸಾಬೀತು ಪಡಿಸಿದ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು.

ಕಾಂಗ್ರೆಸ್‌ನಲ್ಲಿ ಡಿಸಿಎಂ ಹಾಗೂ ಸಿಎಂ ಆಗುವ ಅರ್ಹತೆ ಇರುವ ಅನೇಕ ನಾಯಕರಿದ್ದಾರೆ. ಆದರೆ, ಸದ್ಯ ಯಾರಿಗೂ ಅಸಮಾಧಾನ ಇಲ್ಲ. ಡಿಕೆ ಶಿವಕುಮಾರ್‌ ಹಾಗೂ ಎಂ.ಬಿ. ಪಾಟೀಲ್‌ ಡಿಸಿಎಂ ಹುದ್ದೆ ಕೇಳುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ಹೈ ಕಮಾಂಡ್‌ ತೀರ್ಮಾನ ಮಾಡುತ್ತದೆ. ಎರಡು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಠಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಉಪ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಯಾವ ನಾಯಕರೂ ನನ್ನ  ಹಾಗೂ ರಾಹುಲ್‌ ಗಾಂಧಿ ಬಳಿ ಕೇಳಿಲ್ಲ ಎಂದು ಹೇಳಿದರು.

Advertisement

ರಮೇಶ್‌ ಕುಮಾರ್‌ಗೆ ಬೆಂಬಲಿಸಿ
ವಿಧಾನಸಭಾಧ್ಯಕ್ಷ ಸ್ಥಾನ ರಾಜಕೀಯೇತರ ಸಂವಿಧಾನಾತ್ಮಕ ಸ್ಥಾನವಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸಭಾಧ್ಯಕ್ಷರ ಆಯ್ಕೆ ವಿಷಯದಲ್ಲಿ ರಾಜಕಾರಣ ಮಾಡದೇ ರಮೇಶ್‌ ಕುಮಾರ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಬೇಕೆಂದು ಪರಮೇಶ್ವರ್‌ ಮನವಿ ಮಾಡಿದರು.

ಇವಿಎಂ ಮೇಲೆ ಅನುಮಾನ: ಲೋಕಸಭೆಗೆ ಬ್ಯಾಲೆಟ್‌ಗೆ ಆಗ್ರಹ 
ವಿಧಾನಸಭಾ ಚುನಾವಣೆಗೂ ಮೊದಲೇ ಇವಿಎಂ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ ಈಗ ಮತ್ತೆ ಇವಿಎಂ ದೋಷದ ಬಗ್ಗೆ ಪ್ರಸ್ತಾಪಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ  ಇವಿಎಂ ಟ್ಯಾಂಪರಿಂಗ್‌ ಆಗಿರುವ ಬಗ್ಗೆ ಈಗಲೂ ಅನುಮಾನ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಅನೇಕ ಕ್ಷೇತ್ರಗಳಲ್ಲಿ  ಶೇಕಡಾ 70 ರಿಂದ 80 ರಷ್ಟು ಕಾಂಗ್ರೆಸ್‌ ಪರವಾದ ಮತದಾರರಿದ್ದರೂ, ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಅಂತರದಿಂದ ಗೆದ್ದಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಚುನಾವಣೆಗೂ ಮೊದಲೇ ಚುನಾವಣಾ ಆಯೋಗಕ್ಕೆ ಇವಿಎಂ ಯಂತ್ರಗಳ ಬದಲು ಬ್ಯಾಲೆಟ್‌ ಪೇಪರ್‌ ಬಳಸುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ, ಇವಿಎಂ ಬಳಕೆ ಮಾಡಿದ್ದರಿಂದ ಕಾಂಗ್ರೆಸ್‌ ಕಡಿಮೆ ಸ್ಥಾನ ಪಡೆಯುವಂತಾಯಿತು ಎಂದು ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬಳಸುವ ಬದಲು ಮತ ಪತ್ರ ಬಳಸುವಂತೆ ಚುನಾವಣಾ ಆಯೋಗಕ್ಕೆ ಮತ್ತೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಹೈ ಕಮಾಂಡ್‌ ನಿರ್ಧಾರ ಮಾಡಲಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುವುದರಿಂದ ಸರ್ಕಾರ ಮತ್ತು ಪಕ್ಷವನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟ. ಹೀಗಾಗಿ ಸಮರ್ಥರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದು ಒಳಿತು.  ಡಿ.ಕೆ. ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಂತೋಷ. ಆದರೆ, ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಕಾಂಗ್ರೆಸ್‌ನಲ್ಲಿ ಜಾತಿ ಆಧಾರದ ಮೇಲೆ ಯಾವುದೇ ಹುದ್ದೆಗಳನ್ನು ನೀಡುವುದಿಲ್ಲ. ನಾನು ದಲಿತ ಎನ್ನುವ ಕಾರಣಕ್ಕೆ ಡಿಸಿಎಂ ಪಟ್ಟ ನೀಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನನ್ನ ಅರ್ಹತೆ ನೋಡಿ. ಉಪ ಮುಖ್ಯಮಂತ್ರಿ ಹುದ್ದೆ ನೀಡಿದ್ದಾರೆ.
– ಡಾ.ಜಿ.ಪರಮೇಶ್ವರ್‌

Advertisement

Udayavani is now on Telegram. Click here to join our channel and stay updated with the latest news.

Next