ಹೊಸದಿಲ್ಲಿ : ಪಾಕ್ ಮಿಲಿಟರಿ ಕೋರ್ಟ್‌ನಿಂದ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ, 46ರ ಹರೆಯದ ಕುಲಭೂಷಣ್ ಯಾದವ್ ವಿರುದ್ಧದ ಪ್ರಕರಣದಲ್ಲಿ “ದ ಹೇಗ್’ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ಥಾನದ ಪರ ವಾದಿಸಿ ಪರಾಜಯ ಕಂಡಿರುವ ಪಾಕ್ ವಕೀಲ ಖವರ್ ಕುರೇಶಿಯನ್ನು 2004ರಲ್ಲಿ ಭಾರತದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಭಾರತದ ಪ್ರತಿಭಾವಂತ ಹಿರಿಯ ವಕೀಲರನ್ನು ಕಡೆಗಣಿಸಿ, ದಾಭೋಲ್ ಪವರ್ ಪ್ರಾಜೆಕ್ಟ್ ಕೇಸಿನಲ್ಲಿ ಭಾರತ ಸರಕಾರದ ಪರ ವಾದಿಸುವಂತೆ ಗೊತ್ತುಪಡಿಸಿಕೊಂಡಿತ್ತು ಎಂಬ ಅತ್ಯಂತ ಅಚ್ಚರಿಯ ವಿಷಯ ಇದೀಗ ಬಹಿರಂಗವಾಗಿದೆ.
ಕುಲಭೂಷಣ್ ವಿಷಯದಲ್ಲಿ , ಐಸಿಜೆ ಯಲ್ಲಿ , ಭಾರತದ ಪರವಾಗಿ ಆದೇಶ ಹೊರಬಂದಿದೆ; ಪಾಕ್ ಪರ ಅತ್ಯಂತ ದುರ್ಬಲ ವಾದವನ್ನು ಮಂಡಿಸಿರುವ ಕಾರಣಕ್ಕೆ ವಕೀಲ ಖವರ್ ಕುರೇಶಿ ಅವರು ಪಾಕಿಸ್ಥಾನದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
2004ರಲ್ಲಿ ದಾಭೋಲ್ ಪವರ್ ಪ್ರಾಜೆಕ್ಟ್ ಕೇಸಿನಲ್ಲಿ ಐಸಿಜೆಯಲ್ಲಿ ಭಾರತದ ಪರವಾಗಿ ವಾದಿಸಲು ವಕೀಲ ಖವರ್ ಕುರೇಶಿ ಅವರನ್ನು ಆಗಿನ ಯುಪಿಎ ಸರಕಾರಕ್ಕೆ ಶಿಫಾರಸು ಮಾಡಿದ್ದು ಫಾಕ್ಸ್ ಮ್ಯಾಂಡಲ್ ಎಂಬ ಸಂಸ್ಥೆ ಎನ್ನುವುದನ್ನು ವಯಾನ್ ನ್ಯೂಸ್ ಇದೀಗ ಬಹಿರಂಗಪಡಿಸಿದೆ.
ದಾಭೋಲ್ ಕೇಸ್‌ನಲ್ಲಿ ಎನ್‌ರಾನ್ ಕಂಪೆನಿಯು ಭಾರತ ಸರಕಾರದಿಂದ 6 ಬಿಲಿಯ ಡಾಲರ್‌ಗಳ ಪರಿಹಾರವನ್ನು ಆಗ್ರಹಿಸಿತ್ತು. ಕೊನೆಗೆ ಆ ಕೇಸನ್ನು ಆರ್ಬಿಟ್ರೇಶನ್ (ರಾಜಿ ಪಂಚಾಯ್ತಿಕೆ)ಗೆ ಉಲ್ಲೇಖೀಸಲಾಗಿತ್ತು.
2004ರಲ್ಲಿ ಯುಪಿಎ ಸರಕಾರ ಅಧಿಕಾರವನ್ನು ವಹಿಸಿಕೊಂಡಾಗ ದಾಭೋಲ್ ಕೇಸಿಗೆ ಸಂಬಂಧಿಸಿತ ಇಡಿಯ ಕಾನೂನು ತಂಡವನ್ನು ಬದಲಾಯಿಸಿತ್ತು. ಮಾತ್ರವಲ್ಲದೆ ಭಾರತೀಯ ವಕೀಲರನ್ನು ಸಂಪೂರ್ಣವಾಗಿ ಕಡೆಗಣಿಸಿ ಖವರ್ ಕುರೇಶಿ ಅವರನ್ನು ಭಾರತ ಸರಕಾರದ ಪರವಾಗಿ ಐಸಿಜೆಯಲ್ಲಿ ಪ್ರತಿನಿಧಿಸಿ, ವಾದಿಸುವುದಕ್ಕೆ ನೇಮಕ ಮಾಡಿತ್ತು ಎಂಬ ವಿಷಯ ಈಗ ಬಹಿರಂಗವಾಗಿದೆ.