ಬೆಂಗಳೂರು: ಟಿಕೆಟ್ ಕೊಟ್ಟು ಗೆಲ್ಲಿಸಿದ ಪಕ್ಷವನ್ನೇ ತೊರೆದು ಮೈತ್ರಿ ಸರ್ಕಾರ ಉರುಳಲು ಕಾರಣವಾಗಿರುವ ಹದಿಮೂರು ಜನ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ. ಪಕ್ಷದ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ಹಿರಿಯ ನಾಯಕರು, ಈಗಾಗಲೇ ರಾಜೀನಾಮೆ ಸಲ್ಲಿಸಿರುವ ಶಾಸಕರ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಪರ್ಯಾಯ ಅಭ್ಯರ್ಥಿಗಳು ಇರುವ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ.
ಈಗಾಗಲೇ ಹದಿಮೂರು ಶಾಸಕರು ಪಕ್ಷದ ವಿಪ್ ಉಲ್ಲಂಘನೆ ಮಾಡಿರುವುದರಿಂದ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು ನೀಡಿದ್ದು, ಅದಕ್ಕೆ ಪೂರಕವಾದ ಎಲ್ಲ ದಾಖಲೆಗಳನ್ನು ಒದಗಿಸಿದ್ದಾರೆ. ಒಂದು ವೇಳೆ, ಸ್ಪೀಕರ್ ಅನರ್ಹಗೊಳಿಸಲು ಪೂರಕ ದಾಖಲೆಗಳನ್ನು ಕೇಳಿದರೂ, ಒದಗಿಸುವ ಕುರಿತಂತೆಯೂ ಸಭೆಯಲ್ಲಿ ಚರ್ಚೆಯಾಗಿದ್ದು ಹೇಗಾದರೂ ಮಾಡಿ, ಅವರು ಶಾಸಕತ್ವದಿಂದ ಅನರ್ಹರಾಗಿ ಕೋರ್ಟ್‌ಗೆ ಅಲೆದಾಡುವಂತೆ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ವೇಳೆ, ಅವರ ಶಾಸಕತ್ವದಿಂದ ಅನರ್ಹಗೊಳ್ಳದಿದ್ದರೂ, ಉಪ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಹೇಗಾದರೂ ಮಾಡಿ ಸೋಲಿಸಲು ಎಲ್ಲ ನಾಯಕರು ಸಾಮೂಹಿಕವಾಗಿ ಪಣ ತೊಟ್ಟಿದ್ದಾರೆ. ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿಯನ್ನು ಯಾವುದೇ ಕಾರಣಕ್ಕೂ ಗೆಲ್ಲಲು ಬಿಡುವುದಿಲ್ಲ ಎಂದು ಸ್ವತಃ ಅವರ ಸಹೋದರ ಸತೀಶ್ ಜಾರಕಿಹೊಳಿ ಸಭೆಯಲ್ಲಿ ನಾಯಕರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹೊಣೆ ಕೊಡಿ ಎಂದ ಡಿಕೆಶಿ: ಬೆಂಗಳೂರಿನ ನಾಲ್ವರು ಶಾಸಕರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನೀಡುವಂತೆ ಡಿ.ಕೆ.ಶಿವಕುಮಾರ್ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಆಪ್ತರೆಂದು ಹೇಳಿಕೊಂಡ ಎಂ.ಟಿ.ಬಿ.ನಾಗರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜ್ ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು. ಅವರು ನನ್ನ ಹೆಸರಿಗೆ ಮಸಿ ಬಳೆದಿದ್ದಾರೆ. ಅವರು ರಾಜಕೀಯವಾಗಿ ಮೇಲೆ ಬರದಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದ್ದು, ಅವರನ್ನು ಸೋಲಿಸಲು ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಸಂಪೂರ್ಣ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್‌ಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅತೃಪ್ತರ ಮೇಲೆ ಕ್ರಮ ಆಗಲೇಬೇಕು. ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ತೀರ್ಮಾನವಾಗಿದೆ. ಮೈತ್ರಿ ಮುಂದುವರಿಸುವುದು ಹಾಗೂ ಪ್ರತಿಪಕ್ಷದ ನಾಯಕನ ಆಯ್ಕೆ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡಲಿದೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ