ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಂವಿಧಾನ ರಕ್ಷಿಸುವ ಹೊಣೆಯನ್ನು ಕಾಂಗ್ರೆಸ್ ಮಾಡಬೇಕಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಶಪಥಗೈಯುವ ಮೂಲಕ 71ನೇ ಗಣರಾಜ್ಯೋತ್ಸವ ಆಚರಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಸಂವಿಧಾನದ ಪ್ರಸ್ತಾವನೆ ವಾಚನ ಮಾಡಿ ಸಂವಿಧಾನ ರಕ್ಷಣೆ ಪಣ ತೊಟ್ಟರು. ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ದಿನೇಶ್ ಗುಂಡೂರಾವ್, ಪ್ರಸಕ್ತ ರಾಜಕೀಯದಲ್ಲಿ ಸಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಹಿತಾಸಕ್ತಿಗಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ.
ಬಿಜೆಪಿ ವಿಚಾರಧಾರೆಗಳ ವಿರುದ್ಧ ಮಾತನಾಡಿದವರಿಗೆ ದೇಶ ವಿರೋಧಿಗಳ ಪಟ್ಟ ಕಟ್ಟಲಾಗುತ್ತಿದೆ ಎಂದು ಕಿಡಿಕಾರಿದರು. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರದ ತಪ್ಪು ವಿಚಾರಗಳು, ಜನವಿರೋಧಿ ನೀತಿಗಳ ವಿರುದ್ಧ ಧ್ವನಿಯೆತ್ತುವುದು ಕಾಂಗ್ರೆಸಿಗರ ಕರ್ತವ್ಯವಾಗಬೇಕು. ಜನ ಕಾಂಗ್ರೆಸ್ ನಡೆಯನ್ನು ಗಮನಿಸುತ್ತಿದ್ದಾರೆ.
ನಮ್ಮ ನಮ್ಮಲ್ಲಿ ಏನೇ ಸಣ್ಣಪುಟ್ಟ ಗೊಂದಲಗಳಿದ್ದರೂ ಅವುಗಳನ್ನೆಲ್ಲಾ ಬದಿಗೊತ್ತಿ ಸಂವಿಧಾನ ಉಳಿಸಿಕೊಳ್ಳಲು ಹೋರಾಟ ಮಾಡಬೇಕೆಂದರು. ಸಂವಿಧಾನ ವಿರೋಧಿಗಳು ಗಣರಾಜ್ಯೋತ್ಸವ ಆಚರಣೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಸಂದರ್ಭ ಸಿಕ್ಕಾಗಲೆಲ್ಲಾ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಕೋಮುವಾದ ಪ್ರತಿಪಾದಿಸುತ್ತಾರೆ. ಕಾಂಗ್ರೆಸಿಗರಾದ ನಾವು ದೇಶವನ್ನು ದೇಶದ ಸಂವಿಧಾನ ಉಳಿಸುವ ಕೆಲಸ ಮಾಡಬೇಕೆಂದರು.
ಬಿಜೆಪಿಯಿಂದ ದೇಶಕ್ಕೆ ಅಪಾಯ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶ ಅಪಾಯಕ್ಕೆ ಸಿಲುಕಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಹಲವರ ಪ್ರಾಣ ತ್ಯಾಗದಿಂದಲೇ ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ. ನಮ್ಮ ಸಂವಿಧಾನ ಶ್ರೇಷ್ಠ ಸಂವಿಧಾನ. ಸಂವಿಧಾನದ ಮೇಲೆ ಬಿಜೆಪಿ ಅವರಿಗೆ ನಂಬಿಕೆ ಇಲ್ಲ. ಅವರು ಮನುವಾದದ ಮೇಲೆ ನಂಬಿಕೆ ಇಟ್ಟಿದ್ದಾರೆ.
ಬಿಜೆಪಿ ಸಂಸದರು ಸಂಸತ್ತಿನಲ್ಲಿ ಸಂವಿಧಾನ ವಿರೋಧ ಮಾಡಿ, ಸಂವಿಧಾನ ಬದಲಾವಣೆ ಮಾಡಬೇಕು ಎನ್ನುತ್ತಿದ್ದಾರೆ. ಕಾಂಗ್ರೆಸ್ ಕೇಂದ್ರದ ವಿರುದ್ಧ ಹೋರಾಡಿ ಸಂವಿಧಾನ ರಕ್ಷಣೆ ಮಾಡಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ತರುವಾಯ ದೇಶ ಅಪಾಯಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿಸಿ ಕಾನೂನು ರೂಪಿಸುತ್ತಿದೆ.ಆದರೆ ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು ಎಂದು ಹೇಳಿದರು.