ಶಿವಮೊಗ್ಗ: ಇತ್ತೀಚೆಗೆ ಹತ್ಯೆಯಾದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ನಿವಾಸಕ್ಕೆ ಇಂದು ಕಾಂಗ್ರೆಸ್ ನಾಯಕರು ಭೇಟಿ ನೀಡಿ, ಸಾಂತ್ವನ ಹೇಳಿದರು. ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿ ಹಲವರು ಭೇಟಿ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಪಾಲಕೃಷ್ಣ, ಈ ಘಟನೆ ನಡೆಯಬಾರದಿತ್ತು. ಹರ್ಷನನ್ನು ಕಳೆದುಕೊಂಡ ಕುಟುಂಬದವರ ನೋವು ನಮಗೆ ಅರ್ಥವಾಗುತ್ತದೆ. ಈ ಪ್ರಕರಣದಲ್ಲಿ ಪಾಲ್ಗೊಂಡಿರುವ ಅರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ. ರಾಜ್ಯದಲ್ಲೀಗ ಬಿಜೆಪಿ ಸರ್ಕಾರವಿದೆ. ಅವರೇ ಸೂಕ್ತವಾದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಿ ಎಂದರು.
ಘಟನೆಯಿಂದಾಗಿ ನಗರದ ಜನತೆ ಬಹಳಷ್ಟು ನೊಂದಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ತುಂಬಾ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು. ಕಾಂಗ್ರೆಸ್ ಪಕ್ಷ ಹರ್ಷನ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲಿದೆ. ಪಕ್ಷದ ನಾಯಕರು ಮುಂದಿನ ದಿಗಳಲ್ಲಿ ಹರ್ಷನ ಮನೆಗೆ ಭೇಟಿ ನೀಡಲಿದ್ದಾರೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಪಾದಯಾತ್ರೆ ಮಾಡಿದರೆ ಮೇಕೆದಾಟು ಯೋಜನೆ ಆಗಲ್ಲ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಹರ್ಷ ಮನೆಗೆ ಭೇಟಿ ನೀಡಲಿದ್ದಾರೆ.ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಸಿದ್ದು-ಡಿಕೆಶಿ ಹೇಳಿದ್ದಾರೆ. ಕಾಂಗ್ರೆಸ್ ನಿಂದ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಇಷ್ಟು ದಿನ 114 ಸೆಕ್ಷನ್, ಕರ್ಫ್ಯೂ ಇತ್ತು, ಅದಕ್ಕೆ ತಡವಾಗಿ ಬಂದಿದ್ದೇವೆ ಎಂದರು.
ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು, ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಪೊಲೀಸರ ತನಿಖೆಗೆ ಕಷ್ಟವಾದರೆ ನ್ಯಾಯಾಂಗ ತನಿಖೆಗೆ ನೀಡುವಂತೆ ನಮ್ಮ ನಾಯಕರು ಹೇಳಿದ್ದಾರೆ. ಹರ್ಷ ಕುಟುಂಬಕ್ಕೆ ನ್ಯಾಯ ಸಿಗಬೇಕು, ಅದಕ್ಕೆ ನಮ್ಮ ಎಲ್ಲರ ಸಹಕಾರ, ಬೆಂಬಲ ಇದೆ. ಹರ್ಷ ಕೊಲೆಯ ಹಿಂದೆ ಯಾವ ಸಂಘಟನೆ ಇದೆ ಎಂದು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು. ಹರ್ಷನ ಕುಟುಂಬಕ್ಕೆ ಮುಂದೆ ಯಾವುದೇ ಸಹಾಯ ನೀಡಲು ಕಾಂಗ್ರೆಸ್ ಸಿದ್ದ ಎಂದು ಸುಂದರೇಶ್ ಹೇಳಿದರು