ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 4ನೇ ದಿನವಾದ ಸೋಮವಾರವೂ ವಿಚಾರಣೆಗೆ ಹಾಜರಾಗಿದ್ದಾರೆ.
ಇದರ ನಡುವೆಯೇ, ಇತ್ತೀಚೆಗೆ ರಾಹುಲ್ ವಿಚಾರಣೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಪಕ್ಷದ ನಾಯಕ ರೊಂದಿಗೆ ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ಹಿರಿಯ ನಾಯಕರ ನಿಯೋಗ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರನ್ನು ಭೇಟಿ ಯಾಗಿ ದೂರು ಸಲ್ಲಿಸಿತು.
ಜತೆಗೆ, ಅಗ್ನಿಪಥ ಯೋಜನೆ ಕುರಿತೂ ಪ್ರಸ್ತಾವಿಸಿ, ಅದನ್ನು ವಾಪಸ್ ಪಡೆಯುವಂತೆ ಮನವಿ ಸಲ್ಲಿಸಿತು. ರಾಜ್ಯಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಸೇರಿದಂತೆ ಪ್ರಮುಖರು ನಿಯೋಗದ ಲ್ಲಿದ್ದರು. ಇದಕ್ಕೂ ಮುನ್ನ ಸಂಸತ್ ಭವನದಿಂದ ವಿಜಯ್ ಚೌಕ್‌ವರೆಗೆ ನಾಯಕರು ರಾಹುಲ್ ಪರ ಪಾದಯಾತ್ರೆ ನಡೆಸಿದರು. ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯೂ ನಡೆಯಿತು.
40 ಗಂಟೆ ವಿಚಾರಣೆ: ಸೋಮವಾರ ಬೆಳಗ್ಗೆ 11.05ರ ವೇಳೆಗೆ ಇ.ಡಿ. ಪ್ರಧಾನ ಕಚೇರಿಗೆ ಆಗಮಿಸಿದ ರಾಹುಲ್, ಮಧ್ಯಾಹ್ನದವರೆಗೂ ವಿಚಾರಣೆ ಎದುರಿಸಿದರು. ಬಳಿಕ 1 ಗಂಟೆ ಕಾಲ ವಿರಾಮ ಪಡೆದು, ಸಂಜೆ 4.45ಕ್ಕೆ ಮತ್ತೆ ಇ.ಡಿ. ಮುಂದೆ ಹಾಜರಾದರು. ಈ ಮೂಲಕ ಕಳೆದ 4 ದಿನಗಳಲ್ಲಿ ಒಟ್ಟಾರೆ 40 ಗಂಟೆಗಳ ಕಾಲ ರಾಹುಲ್ ವಿಚಾರಣೆ ನಡೆದಂತಾಗಿದೆ.