ಬೆಂಗಳೂರು: ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಜಾಹೀರಾತಿನಲ್ಲಿ ಯಡ್ಡಿ-ಚಡ್ಡಿ ಮೊದಲಾದ ಕೀಳು ಪದ ಪ್ರಯೋಗ ಮಾಡುವ ಜತೆಗೆ ಬಿಜೆಪಿ ಪ್ರಚಾರದ ವಿಡಿಯೋ ವ್ಯಾನ್‌ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಜಾಹೀರಾತಿನಲ್ಲಿ ಅಭಿವೃದ್ಧಿಯ ಅಜೆಂಡಾ ಇಲ್ಲ. ಯಡ್ಡಿ- ಚಡ್ಡಿ ಮೊದಲಾದ ಕೆಟ್ಟ ಪದಗಳ ಮೂಲಕ ಜಾಹೀರಾತು ನೀಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಕ್ಕೆ ಇದು ಶೋಭೆ ತರುವುದಿಲ್ಲ. ಕೋರ್ಟ್‌ನಲ್ಲಿ ಇತ್ಯರ್ಥವಾದ ಪ್ರಕರಣವನ್ನೇ ಮತ್ತೆ ಕೆದುಕುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಮಾತನಾಡಿದ್ದ ಕಾಂಗ್ರೆಸ್ 40 ಸೀಟಿಗೆ ಬಂದಿಳಿದಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಇದೇ ಸ್ಥಿತಿಗೆ ಬರಲಿದೆ ಎಂದು ಹೇಳಿದರು.
ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಜೆಪಿ ಪ್ರಚಾರ ವಾಹನ ಸಂಚಾರ ಮಾಡುತ್ತಿದೆ. ವಿವಿಧ ವಿಡಿಯೋಗಳ ಮೂಲಕ ಪ್ರಚಾರ ಪ್ರಕ್ರಿಯೆ ನಡೆಯುತ್ತಿದೆ. ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ನಾಯಕರು ಬೆಂಗಳೂರು, ಕೋಲಾರ, ದಾವಣಗೆರೆ ಹಾಗೂ ಧಾರವಾಡದಲ್ಲಿ ಬಿಜೆಪಿ ಪ್ರಚಾರದ ವ್ಯಾನ್‌ನಲ್ಲಿದ್ದ ವಿಡಿಯೋ ಪರದೆಯನ್ನು ಒಡೆದು ಹಾಕಿದ್ದಾರೆ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಭದ್ರತೆ ದೃಷ್ಟಿಯಿಂದ ಹೋಗಿಲ್ಲ ಉಡುಪಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರಲ್ಲಿ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುವಂತೆ ನಾವೆಲ್ಲರೂ ಮನವಿ ಮಾಡಿಕೊಂಡಿದ್ದೆವು. ಭದ್ರತೆಯ ಕಾರಣದಿಂದಾಗಿ ಉಡುಪಿ ಮಠಕ್ಕೆ
ಹೋಗಿರಲಿಲ್ಲ. ಮಠದ ಆವರಣದಲ್ಲಿ ಎಸ್‌ಪಿಜಿಯವರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಭದ್ರತಾ ಆತಂಕ
ಇರುವುದಾಗಿ ಹೇಳಿದ್ದರಿಂದ ಮಠಕ್ಕೆ ಭೇಟಿ ನೀಡಿಲ್ಲ.
ಪ್ರಧಾನಿಯವರಿಗೆ ಝಡ್ ಫ್ಲಸ್ ಭದ್ರತೆ ಇರುವುದರಿಂದ ಶಿಷ್ಠಾಚಾರ ಉಲ್ಲಂಘನೆ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಇದೇ ಸಮಸ್ಯೆ ಉದ್ಭವಾಗಿತ್ತು. ಆದರೆ, ಅವರು ಇದನ್ನೆಲ್ಲ ಲೆಕ್ಕಿಸದೆ ಭೇಟಿ ನೀಡಿದ್ದರು. ಪ್ರಧಾನಿಯವರು ಕೃಷ್ಣಮಠಕ್ಕೆ ಭೇಟಿ ನೀಡದೇ ಇರುವುದರ ಹಿಂದೆ ಯಾವುದೇ ದುರುದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹೊಗಳಿಕೆ ನಮ್ಮಸಂಸ್ಕೃತಿ ಹಿರಿಮೆ
ಮಾಜಿ ಪ್ರಧಾನಿ ದೇವೇಗೌಡರನ್ನು ಪ್ರಧಾನಿ ಮೋದಿಯವರು ಹೋಗಳಿದ್ದು ನಮ್ಮ ಸಂಸ್ಕೃತಿ ಹಿರಿಮೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ವಯಸ್ಸಿನಲ್ಲಿ ತುಂಬಾ ಚಿಕ್ಕವರು, ದೇವೇಗೌಡ ರಂತಹ ಮುತ್ಸದ್ಧಿಗಳ ವಿರುದ್ಧ ಮಾತನಾಡುವಾಗ ಅರಿವಿರಬೇಕು. ರಾಹುಲ್ ಗಾಂಧಿ ಮಾಡಿದ್ದ ಟೀಕೆ ಸರಿಯಿಲ್ಲ ಎಂದು ಮೋದಿ ಹೇಳಿದ್ದಾರೆ ಅಷ್ಟೆ. ನಾವು ಯಾರ ಜತೆನೂ ಮೈತ್ರಿ ಮಾಡಿಕೊಂಡಿಲ್ಲ. 224 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಪ್ರಬಲ ಸ್ಪರ್ಧೆ ನೀಡಲಿದ್ದಾರೆ ಎಂದು ಹೇಳಿದರು.