Advertisement

ರಾಜ್ಯದಿಂದಲೇ ಬಿಜೆಪಿ ಕ್ವಿಟ್‌ ಚಳವಳಿ: ಸಿದ್ದರಾಮಯ್ಯ

07:00 AM Aug 10, 2017 | |

ಬೆಂಗಳೂರು: ಕ್ವಿಟ್‌ ಇಂಡಿಯಾ ಚಳವಳಿ ಮಾದರಿಯಲ್ಲಿ ದೇಶದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರವನ್ನು ಕೇಂದ್ರದಿಂದ ಕಿತ್ತೂಗೆಯಲು ಅಧಿಕಾರ ಬಿಟ್ಟು ತೊಲಗಿ ಚಳವಳಿ ನಡೆಸಬೇಕು. ಆ ಚಳವಳಿ ಕರ್ನಾಟಕದಿಂದಲೇ ಆರಂಭವಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಕ್ವಿಟ್‌ ಇಂಡಿಯಾ ಚಳವಳಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪುರಭವನದಿಂದ ಫ್ರೀಡಂ ಪಾರ್ಕ್‌ ವರೆಗೂ ಜಾಥಾ ನಡೆಸಿದ
ನಂತರ ಸಮಾವೇಶದಲ್ಲಿ ಮಾತನಾಡಿದ ಅವರು, “2019 ಕ್ಕೆ ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಬೇಕು.
ಅದಕ್ಕಾಗಿ 2018 ರಲ್ಲಿ ನಡೆಯುವ ರಾಜ್ಯ ವಿಧಾನಸಭೆಯಿಂದಲೇ ಗೆಲುವಿನ ಯಾತ್ರೆ ಆರಂಭಿಸಬೇಕು’ ಎಂದು ತಿಳಿಸಿದರು.

ಮತ್ತೆ ವಿಶ್ವಾಸ ಗಳಿಸಬೇಕಿದೆ: “ರಾಜ್ಯದಲ್ಲಿ ಬಿಜೆಪಿಗೆ ಈಗಲೇ ಸೋಲಿನ ಭೀತಿ ಆರಂಭ ವಾಗಿದೆ. ನಾವು ಕಳೆದ ನಾಲ್ಕು ವರ್ಷದಲ್ಲಿ ಜನ ಮೆಚ್ಚುವ ರೀತಿ ಆಡಳಿತ ನಡೆಸಿದ್ದೇವೆ. ಮುಜುಗರ ಪಟ್ಟುಕೊಳ್ಳುವಂತಹ ಕೆಲಸ ಮಾಡಿಲ್ಲ. ನಾವೆಲ್ಲ ಮತ್ತೆ ಜನರ ಪ್ರೀತಿ ವಿಶ್ವಾಸ ಗಳಿಸಬೇಕಿದೆ. ಅದಕ್ಕಾಗಿ ಎಲ್ಲರೂ ಎದೆಯುಬ್ಬಿಸಿ ಜನರ ಬಳಿಗೆ ಹೋಗೋಣ  ಎಂದರು.  

“ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಾರೆ. ಅದನ್ನೇ ನಾವು ಸವಾಲಾಗಿ ಸ್ವೀಕರಿಸೋಣ’
ಎಂದರು. 

ಬಿಜೆಪಿ ಕಿತ್ತೂಗೆಯಲು ಶಪಥ: “ಯಡಿಯೂರಪ್ಪ ಸಿಎಂ ಆಗಿದ್ದಾಗ ಹೊಡೆಯೋ ರೀತಿ ಬಂದ್ದಿದರು. ನಾನೂ, ಬನ್ರಿ ಮುಂದಕ್ಕೆ ಎಂದು ತೋಳು ತಟ್ಟಿದ್ದೆ. ನೀವಷ್ಟೇ ಗಂಡಸರಲ್ಲ, ನಮ್ಮ ತಾಯಂದಿರು ನಮಗೆ ಚೆಡ್ಡಿ ಹಾಕಿ ಬೆಳೆಸಿದ್ದಾರೆ ಎಂದು ಹೇಳಿದ್ದೆ. ಬಳ್ಳಾರಿಗೆ ಬಂದು ನೋಡಿ ಎಂದರು. 

Advertisement

ಬಳ್ಳಾರಿವರೆಗೂ ಪಾದಯಾತ್ರೆ ಮಾಡಿ ರಾಜ್ಯದಿಂದ ಬಿಜೆಪಿ ಅಧಿಕಾರವನ್ನು ಕಿತ್ತೂಗೆಯುವ ಶಪಥ ಮಾಡಿದ್ದೇವು. ಅದೇ ರೀತಿ ಮುಂದಿನ ಬಾರಿ ದೆಹಲಿ ಬಿಜೆಪಿಯ ಕೇಂದ್ರ ಸರ್ಕಾರದ ಅಧಿಕಾರವನ್ನು ಕಿತ್ತೂಗೆ ಯುವ ಶಪಥ ಮಾಡಬೇಕು’ ಎಂದು ಹೇಳಿದರು.

ನಾವೇನು ಶಾಗೆ ಕಲ್ಲು ಹೊಡೆಯೊಲ್ಲ!
“ರಾಜ್ಯಕ್ಕೆ ಅಮಿತ್‌ ಶಾ ಬರುತ್ತಿದ್ದಾರಂತೆ, ಬಂದು ಹೋಗಲಿ. ನಾವೇನೂ ಅವರಿಗೆ ಕಲ್ಲು ಹೊಡೆಯುವುದಿಲ್ಲ. ನಮ್ಮದು ಕಲ್ಲು ಹೊಡೆಯುವ ಸಂಸ್ಕೃತಿಯಲ್ಲ. ಒಂದು ರಾಷ್ಟ್ರೀಯ ಪಕ್ಷದ ನಾಯಕನಿಗೆ ಕಾರ್ಯಕರ್ತರಿಂದ ಕಲ್ಲು ಹೊಡೆಸುತ್ತಾರೆ ಇವರಿಗೆ ನಾಚಿಕೆಯಾಗಬೇಕು’ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.

ಡಿಕೆಶಿ ಜತೆ ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು
ಫ್ರೀಡಂ ಪಾರ್ಕ್‌ ನಲ್ಲಿ ನಡೆದ ಕ್ವಿಟ್‌ ಇಂಡಿಯಾ ಚಳವಳಿ ನೆನಪಿನ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಯುವಕರು ಮತ್ತು ಮಹಿಳಾ ಕಾರ್ಯಕರ್ತೆಯರು ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟರು. ಶಿವಕುಮಾರ್‌ ಕೂಡ ಎಲ್ಲರೊಂದಿಗೂ ನಗು ನಗುತ್ತಲೇ ಸೆಲ್ಫಿಗೆ ಜತೆಯಾದರು.

ಸ್ವಾತಂತ್ರ್ಯ ಹೋರಾಟದ ಅರಿವಿಲ್ಲ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತನಾಡಿ, “ದೇಶದ ಯುವ ಜನತೆಗೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ತಿಳಿಸುವ ಅಗತ್ಯವಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮುಖಂಡರಿಗೆ ಸ್ವಾತಂತ್ರ್ಯ ಹೋರಾಟದ ಅರಿವಿಲ್ಲ. ತ್ಯಾಗದ ಜೀವನ ಗೊತ್ತಿಲ್ಲ.
ನರೇಂದ್ರ ಮೋದಿ ಆರ್‌ಎಸ್‌ಎಸ್‌ ಸ್ವಯಂಸೇವಕನಾಗಿದ್ದು, ದೇಶದಲ್ಲಿ ನಡೆಯುವ ದಲಿತರ ಮೇಲಿನ ದೌರ್ಜನ್ಯ ಹೇಗೆ ತಿಳಿಯಬೇಕು? ಹೀಗಾಗಿ ಕಾಂಗ್ರೆಸ್‌ ಇನ್ನಷ್ಟು ಶಕ್ತಿಶಾಲಿಯಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ. ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್‌ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದರು. ಸಚಿವರಾದ ಕೆ.ಜೆ.ಜಾರ್ಜ್‌, ರೋಷನ್‌ ಬೇಗ್‌, ಎಚ್‌.ಆಂಜನೇಯ, ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್‌, ಎಂ.ಕೃಷ್ಣಪ್ಪ, ಶಾಸಕರಾದ ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಜನಪ್ರತಿನಿಧಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

ಬೃಹತ್‌ ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೂ ಮೊದಲು ಕ್ವಿಟ್‌ ಇಂಡಿಯಾ ಚಳವಳಿಗೆ 75 ವರ್ಷ ತುಂಬಿದ ಸಂಭ್ರಮಾಚರಣೆ ಪ್ರಯುಕ್ತ ನಗರದ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್‌ ಮೆರವಣಿಗೆ ನಡೆಸಲಾಯಿತು. ನೂರಾರು ಕಾಂಗ್ರೆಸ್‌ ಕಾರ್ಯಕರ್ತರು, ವಿದ್ಯಾರ್ಥಿಗಳು ಪಾದಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕ್ವಿಟ್‌ ಇಂಡಿಯಾ ಚಳವಳಿಯ ಹೋರಾಟವನ್ನು ತಿಳಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರು ಬಿಳಿ ಬಟ್ಟೆ,ಗಾಂಧಿ ಟೋಪಿ ಧರಿಸಿದ್ದು ವಿಶೇಷವಾಗಿತ್ತು. ಮೆರವಣಿಗೆ ಉದ್ದಕ್ಕೂ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ನಾಯಕರ ಭಾವಚಿತ್ರ ಪ್ರದರ್ಶನ ಮಾಡಲಾಯಿತು

ಗುಜರಾತ್‌ನಲ್ಲಿ ರಾಜ್ಯಸಭಾ ಸ್ಥಾನ ಗೆದ್ದಿರುವ ಅಹ್ಮದ್‌ ಪಟೇಲ್‌ ಅವರು ಬಿಜೆಪಿಗೆ ಸೋಲಿನ ರುಚಿ ತೋರಿಸಿದ್ದಾರೆ. ಅಹಂಕಾರ ತುಂಬಿರುವ ಪ್ರಧಾನಿ ಮೋದಿ, ಅಮಿತ್‌ ಶಾ ಅವರಿಗೆ ನಾವೆಲ್ಲಾ ಕ್ವಿಟ್‌ ಇಂಡಿಯಾ ಮಾದರಿಯಲ್ಲಿಯೇ ಹೋರಾಟ ನಡೆಸಿ ಬುದ್ಧಿ ಕಲಿಸಬೇಕು. ಬಿಜೆಪಿ, ಆರೆಸ್ಸೆಸ್‌, ವಿಹಿಂಪ ಸೇರಿದಂತೆ ಯಾವುದೇ ಕೋಮುವಾದಿ ಶಕ್ತಿಗಳು ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿಲ್ಲ.ಅವರೆಲ್ಲಾ ಬ್ರಿಟಿಷರ ಜತೆ ಕೈಜೋಡಿಸಿದ್ದರು.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರು ಆ.12ಕ್ಕೆ ರಾಯಚೂರಿಗೆ ಬರಲಿದ್ದಾರೆ. ಆ.16ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ರಾಯಚೂರಿನಲ್ಲಿ 2 ಲಕ್ಷ ಹಾಗೂ ಬೆಂಗಳೂರಿನಲ್ಲಿ 50 ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ, ಬಿಜೆಪಿ ವಿರುದ್ಧ ರಣಕಹಳೇ ಊದೋಣ. ಬಿಜೆಪಿಯನ್ನು ದೇಶದಿಂದ ಓಡಿಸಲು ಸಂಕಲ್ಪ ಮಾಡೋಣ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next