ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಲ್ಲಿಗೆ ಬಂದು ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲವೆಂದು ಸ್ಪಷ್ಟಪಡಿಸಿದರೂ ಕೂಡ ರಾಜ್ಯ ಬಿಜೆಪಿಯ ಸ್ಥಿತಿ ಬೂದಿಯೊಳಗಿನ ಕೆಂಡದಂತಾಗಿದೆ.
ನಾಯಕತ್ವ ಬದಲಾವಣೆಯ ವಿಚಾರವಾಗಿ ಶಾಸಕರ ಹಾಗೂ ಸಚಿವರುಗಳ ಭಿನ್ನಾಭಿಪ್ರಾಯದ ಹೇಳಿಕೆಗಳು ಇಂದು ಕೂಡ ಮುಂದುವರಿದಿದ್ದು, ರಾಜ್ಯ ಬಿಜೆಪಿಯ ಆಡಳಿತ ಚುಕ್ಕಾಣಿಯ ಭವಿಷ್ಯ ಹೇಗೆ ಎನ್ನುವ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಜೈಲಿನಲ್ಲಿರುವ ವಂಚಕ ಯುವರಾಜ ಸ್ವಾಮಿಯಿಂದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಗೆ ದೂರವಾಣಿ ಕರೆ?
ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ನಾಯಕತ್ವ ಬದಲಾವಣೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಪರಸ್ಪರ ಕಚ್ಚಾಡುತ್ತಿರುವ ರಾಜ್ಯ ಬಿಜೆಪಿ ನಾಯಕರ ಕಿವಿಹಿಂಡಿ ಬುದ್ಧಿ ಹೇಳಬೇಕಾದ ಬಿಜೆಪಿ ಹೈಕಮಾಂಡ್ ತೆರೆಮರೆಯಲ್ಲಿ ರಾಜ್ಯದ ನಾಯಕರನ್ನು ಪರಸ್ಪರ ಎತ್ತಿಕಟ್ಟಿ ಕಳ್ಳಾಟ ಆಡುತ್ತಿದೆ ಎಂದು ಅವರು ಗುಡುಗಿದ್ದಾರೆ.
ಬಿಜೆಪಿ ಹೈಕಮಾಂಡ್ ಗೆ ಬೇಕಾಗಿರುವುದು ಸರ್ಕಾರದ ಸುಭದ್ರತೆಯೇ..? ಮುಖ್ಯಮಂತ್ರಿಗಳ ಅಭದ್ರತೆಯೇ..? ಬೇಗ ನಿರ್ಧಾರ ಮಾಡಿಬಿಡಿ ಎಂದು ಅವರು ಹೇಳಿದ್ದಾರೆ.
ಮೋದಿ ತಾವೊಬ್ಬ ದುರ್ಬಲ ನಾಯಕರೆಂದು ಸಾಬೀತುಪಡಿಸಿದ್ದಾರೆ
ಇನ್ನು, ತಮ್ಮ ಮತ್ತೊಂದು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವನ್ನು ಕೆಣಕಿದ ಅವರು, ನಗೆಪಾಟಲಿಗೀಡಾದ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತವನ್ನು ನಿಯಂತ್ರಿಸಲಿಕ್ಕಾಗದ ನರೇಂದ್ರ ಮೋದಿ, ತಾವೊಬ್ಬ ದುರ್ಬಲ ನಾಯಕರೆಂದು ಸಾಬೀತು ಪಡಿಸಿದ್ದಾರೆ ಎಂದಿದ್ದಾರೆ.
56 ಇಂಚಿನ ಎದೆಯವನು ಎಂದು ಕೊಚ್ಚಿಕೊಳ್ಳುವ ಮೋದಿಯವರು ಈಗಿನ ತನ್ನ ಎದೆ ಸುತ್ತಳತೆ ಎಷ್ಟಿದೆ ಎನ್ನುವುದಾದರೂ ಸ್ಪಷ್ಟಪಡಿಸಲಿ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : ಲಸಿಕೆ ಉತ್ಪಾದನೆಯಲ್ಲಿ ನವಜಾತ ಕರುಗಳ ಸೀರಮ್ ಬಳಸದಂತೆ ನಿರ್ದೇಶಿಸಿ : ಡಿಸಿಜಿಐ ಗೆ ಪೆಟಾ ಪತ್ರ