ಬಾಗಲಕೋಟೆ: ಮುಂದಿನ ಚುನಾವಣೆಯಲ್ಲಿ ನಾವು 113 ಸ್ಥಾನ ಗೆಲ್ಲಬೇಕು. ಅದುವೇ ನಮ್ಮ ಮುಂದಿರುವ ಗುರಿ. ಆ ಬಳಿಕ ಸಿಎಂ ಯಾರು ಆಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕಾರು ಜನ ಸಿಎಂ ಆಗಬೇಕೆಂಬ ಆಸೆ ಹೊಂದಿದವರಿದ್ದಾರೆ. ಅವರವರ ಬೆಂಬಲಿಗರೂ ನಮ್ಮ ನಾಯಕರೇ ಸಿಎಂ ಆಗಲಿ ಎಂದು ಹೇಳುವುದು ಸಹಜ. ಹಾಗೆ ಹೇಳುವವರನ್ನು ನಿಯಂತ್ರಿಸಲು ಆಗಲ್ಲ. ಅದು ಅವರ ಅಭಿಮಾನದ ಮಾತುಗಳು. ಯಾರೆಲ್ಲ ಏನೇ ಅಭಿಮಾನ, ಹೇಳಿಕೆ ವ್ಯಕ್ತಪಡಿಸಿದರೂ, ಕೊನೆಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದರು. ಮುಂದಿನ ಚುನಾವಣೆಯಲ್ಲಿ ನಾವು 113 ಸ್ಥಾನ ಗೆಲ್ಲಬೇಕು ಎಂಬುದೇ ನಮ್ಮ ಮುಂದಿನ ಗುರಿ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ನಾನು ಸಹಿತ ಎಲ್ಲರೂ ಗೆಲ್ಲಬೇಕು. ಸಿಎಂ ಯಾರು ಆಗಬೇಕು ಎಂಬುದು ಎಲ್ಲ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧರಿಸುತ್ತದೆ. ಯಾರು, ಯಾರನ್ನೂ ಸೋಲಿಸಲು ಕೆಲಸ ಮಾಡುವುದಿಲ್ಲ. ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ಖರ್ಗೆ, ಪರಮೇಶ್ವರ ಸಹಿತ ಎಲ್ಲರೂ ಸಿಎಂ ಆಗಬೇಕೆಂಬ ಬಯಕೆ ಅವರವರ ಬೆಂಬಲಿಗರಲ್ಲಿದೆ ಎಂದರು.
ನನಗೆ ಇನ್ನೂ ವಯಸ್ಸಿದೆ. ರಾಜಕೀಯದಲ್ಲಿ ಸಾಕಷ್ಟು ಬೆಳೆದಿದ್ದೇನೆ. ಈಗಲೂ ಬೆಳೆಯುತ್ತಿದ್ದೇನೆ. ನನಗೂ ಸಿಎಂ ಆಗಬೇಕೆಂಬ ಕನಸಿದೆ. ಆದರೆ, ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಈಗ ಯಾರು ಸಿಎಂ ಆಗಬೇಕೆಂದು ಬಯಸಿದ್ದಾರೋ ಅವರೆಲ್ಲ ಆಗಲಿ. ಬಳಿಕ ನಮಗೂ ಒಂದು ಕಾಲ ಬಂದಾಗ ನಾನು ಸಿಎಂ ಆಗುತ್ತೇನೆ ಎಂದರು.
ಜಮೀರ್ ಸಿಕ್ಸರ ಬಾರಿಸುತ್ತಾರೆ: ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕೆಂಬ ಶಾಸಕ ಜಮೀರ್ ಅಹ್ಮದ ಅವರ ಹೇಳಿಕೆ ಯಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿಲ್ಲ. ಅವರು ಅಭಿಮಾನ- ಪ್ರೀತಿಯಿಂದ ಹಾಗೆ ಹೇಳಿದ್ದಾರೆ. ಅವರು ಯಾವಾಗಲೂ ಸಿಕ್ಸರ್ ಬಾರಿಸುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಪರವಾಗಿ ಮತ್ತೂಮ್ಮೆ ಸಿಕ್ಸರ್ ಬಾರಿಸಿದ್ದಾರೆ. ಇದಕ್ಕೆ ಗೊಂದಲದ ಲೇಪನ ಮಾಡಬೇಕಿಲ್ಲ ಎಂದು ಹೇಳಿದರು.
ಸರ್ಕಾರ ಜೀವಂತವಾಗಿಲ್ಲ: ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಕೊರೊನಾ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ. ಪ್ರವಾಹ ವೇಳೆ ಸಂತ್ರಸ್ತರಿಗೆ ಸರ್ಕಾರ ಘೋಷಣೆ ಮಾಡಿದ ಅನುದಾನ ಇನ್ನೂ ಬಂದಿಲ್ಲ. ಮನೆ ಕಟ್ಟಿಕೊಡುವುದಾಗಿ ಹೇಳಿ, ವರ್ಷವಾದ್ರೂ ಮಾಡಿಲ್ಲ. ಇಂತಹ ಅವ್ಯವಸ್ಥೆಯ ಸರ್ಕಾರ ಎಂದೂ ಇರಲಿಲ್ಲ ಎಂದರು. ತೈಲ ಬೆಲೆ ಏರಿಕೆಯಿಂದ ಇಡೀ ದೇಶದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರಕ್ಕೆ ಬಡ ಜನರ ಮೇಲೆ ಕಾಳಜಿ ಇದ್ದರೆ ತಕ್ಷಣ ಬೆಲೆ ಇಳಿಕೆ ಮಾಡಬೇಕು. ಬೆಲೆ ಇಳಿಕೆಯಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಇರುವುದಿಲ್ಲ. ಕೇಂದ್ರ ಸರ್ಕಾರ ಸರ್ಕಾರವೇ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.