ಅಥಣಿ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಶಶಿಕಲಾ ಜೊಲ್ಲೆಯವರನ್ನು ಕೈ ಬಿಡದೇ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಸೇರ್ಪಡೆಗೊಳಿಸಿಕೊಂಡಿರುವುದು ಬಿಜೆಪಿಗೆ ನೈತಿಕತೆ ತೋರಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಶಿಕಲಾ ಜೊಲ್ಲೆಯವರು ತಮ್ಮ ಮೊದಲಿನ ಖಾತೆಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದರು. ಆದರೂ ಕೂಡ ಅವರನ್ನು ಮಂತ್ರಿ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ. ಇಷ್ಟೆಲ್ಲ ಹುಳುಕು ಇಟ್ಟುಕೊಂಡಿರುವ ಬಿಜೆಪಿ ವಿರೋಧ ಪಕ್ಷವನ್ನು ಟೀಕಿಸುತ್ತಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಬಗೆಗೆ ಸಿ.ಟಿ.ರವಿ ಮಾಧ್ಯಮಗಳ ಮುಂದೆ ಇಲ್ಲಸಲ್ಲದ ಹೇಳಿಕೆ ಕೊಡುತ್ತಿರುವುದು ಅವರ ನೈತಿಕತೆ ತೋರಿಸುತ್ತದೆ ಎಂದೂ ಆರೋಪಿಸಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ನನಗೆ ಬಿಜೆಪಿ ಹಾಗೂ ಸಂಘ ಪರಿವಾರ ಪ್ರೀತಿ, ವಿಶ್ವಾಸ ನೀಡಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ, ಅವರಿಗೆ ಎಷ್ಟು ಪ್ರೀತಿ ಸಿಕ್ಕಿದೆ, ಈಗಿನ ಪರಿಸ್ಥಿತಿ ಏನು ಎನ್ನುವುದು ನಮಗೆ ಗೊತ್ತಿದೆ. ಸಚಿವನಾಗಲು ಅದೆಷ್ಟೋ ಬಾರಿ ದೆಹಲಿಗೆ ಅಡ್ಡಾಡಿದ್ದಾರೆ ಎನ್ನುವುದು ಕೂಡ ನಮಗೆ ಗೊತ್ತಿರುವ ವಿಷಯವಾಗಿದೆ. ಇಷ್ಟಿದ್ದರೂ ಕೂಡ ನನಗೆ ಇಲ್ಲಿ ಪ್ರೀತಿ, ವಿಶ್ವಾಸ ಸಿಕ್ಕಿದೆ ಎನ್ನುವ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಇನ್ನೂ ದೂರ ಇದೆ. ಅಲ್ಲಿಯವರೆಗೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಚುನಾವಣೆ ಸಂದರ್ಭದಲ್ಲಿ ಘೋಷಣೆಯಾಗುತ್ತದೆ. ಅಥಣಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.
ಶಶಿಕಲಾ ಜೊಲ್ಲೆ ಅವರಿಗೆ ನೈತಿಕತೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸರಕಾರದಿಂದ ಹೊರ ಬರಬೇಕು ಎಂದು ಸತೀಶ ಆಗ್ರಹಿಸಿದರು. ಮಾಜಿ ಸಚಿವ ವೀರಕುಮಾರ ಪಾಟೀಲ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ರಮೇಶ ಸಿಂದಗಿ ಉಪಸ್ಥಿತರಿದ್ದರು.