ಹಾನಗಲ್ಲ: ಸುಳ್ಳಿನ ಕಂತೆ ಕಟ್ಟಿ ಜನರನ್ನು ಮೋಸಗೊಳಿಸುವ ಬಿಜೆಪಿ ಕುತಂತ್ರ ಬಯಲಾಗಿದ್ದು, ಹಾನಗಲ್ಲ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಮತದಾರರು ಸಿದ್ಧರಾಗಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಮಾಡುತ್ತೇವೆ, ಉದ್ಯೋಗ ಸೃಷ್ಟಿಸುತ್ತೇವೆ ಎಂದು ಸಬಕಾ ಸಾಥ್ ಸಬಕಾ ವಿಕಾಸ್ ಎನ್ನುವ ಮೋದಿ ಬಳಗ ಸಬಕಾ ವಿನಾಶ ಮಾಡುತ್ತಿದೆ. 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದವರಿಗೆ ಎರಡು ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಏಳು ವರ್ಷಗಳಲ್ಲಿ ಬಿಜೆಪಿ ನಾಯಕರ ಹಿತ ಕಾಪಾಡುತ್ತಿದೆಯೇ ಹೊರತು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿಲ್ಲ. ಮತದಾರರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿಗೆ ಪಾಠ ಕಲಿಸಿ ಜನಸಮಾನ್ಯರ ಹತ್ತಿರ ಇರುವ ಕಾಂಗ್ರೆಸ್ ಗೆಲ್ಲಿಸಲು ಮನವಿ ಮಾಡಿದರು.
ಪೆಟ್ರೋಲ್, ಅಡುಗೆ ಅನಿಲ, ಡೀಸೆಲ್, ಅಡುಗೆ ಎಣ್ಣೆ, ಆಹಾರ ಪದಾರ್ಥ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಮಾಡಿರುವ ಬಿಜೆಪಿ, ಸ್ವರ್ಗ ಸೃಷ್ಟಿಸುತ್ತೇವೆ ಎಂದು ಹೇಳಿ ನಾಡನ್ನು ನರಕಗೊಳಿಸಿದ್ದಾರೆ. ರೈತರ ಹೋರಾಟಕ್ಕೆ ಬೆಲೆ ಇಲ್ಲ. ರೈತರು ಬೆಳೆದ ಬೆಳೆ ಕೊಳ್ಳುವವರಿಲ್ಲ. ಇದೇ ಬಿಜೆಪಿಯ ಬದಲಾವಣೆ. ಆದರೆ ಮತದಾರರು ಕಾಂಗ್ರೆಸ್ ಆಯ್ಕೆ ಮಾಡುವುದನ್ನೇ ನಿಜವಾದ ಬದಲಾವಣೆ ಎಂದು ಕಾಯ್ದು ಕುಳಿತಿದ್ದಾರೆ. ತಾಲೂಕಿನಲ್ಲಿ ಕಳೆದ ವಿಧಾನಸಭಾ ಚುಮನವಾಣೆಯಲ್ಲಿ ಪರಾಭವಗೊಂಡರೂ ಹಾನಗಲ್ಲ ಜನತೆಯ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ಮಾನೆ ಮತದಾರರ ಪ್ರೀತಿ ಗಳಿಸಿದ್ದಾರೆ. ಬಡವರು, ದೀನದಲಿತರು ಹಾಗೂ ಕೊರೊನಾ ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಹಸ್ತ ನೀಡಿ ಜನರ ಒಲವಿಗೆ ಪಾತ್ರರಾಗಿದ್ದಾರೆ. ಈ ಬಾರಿ ಶ್ರೀನಿವಾಸ ಮಾನೆ ಹಾಗೂ ಪಕ್ಷದ ಎಲ್ಲ ನಾಯಕರು ಒಟ್ಟಾಗಿ ಸೇರಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರನ್ನು ಗೆಲ್ಲಿಸುವ ಪಣ ತೊಟ್ಟಿದ್ದೇವೆ. ಮತದಾರರ ಆಶೀರ್ವಾದ, ಬೆಂಬಲ ಸದಾ ಇದೆ ಎಂದರು.
ಹಾನಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರತ್ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಯೂನಸ್ ಸವಣೂರ, ನಾಗಪ್ಪ ಸವದತ್ತಿ, ಡಿ. ಬಸವರಾಜ, ಕೆಪಿಸಿಸಿ ಕೋಆರ್ಡಿನೇಟರ್ ಶ್ರೀನಿವಾಸ ಹಳ್ಳಳ್ಳಿ, ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಶಿವಕುಮಾರ ತಾವರಗಿ, ಬಸವರಾಜ ಹಾದಿಮನಿ, ರಾಮೂ ಯಳ್ಳೂರ, ರಾಜೂ ಗುಡಿ, ತನ್ವೀರ್ ಉಪ್ಪಿನ ಮೊದಲಾದವರು ಇದ್ದರು.